‘ಜೆಡಿಎಸ್ ಪುಟಗೋಸಿ ಪಕ್ಷ’ ಎಂಬ ಕೇಂದ್ರ ಸಚಿವ ಹೆಗಡೆ ಹೇಳಿಕೆಗೆ ಸಿ.ಎಂ ಪ್ರತಿಕ್ರಿಯೆ ಏನು ?
Update: 2018-06-02 18:48 IST
ಬೆಂಗಳೂರು, ಜೂ. 2: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆಯವರು ತಾನೊಬ್ಬ ‘ಅನಾಗರಿಕ’ ಎಂಬುದನ್ನು ತಮ್ಮ ಕೀಳು ಅಭಿರುಚಿಯ ಹೇಳಿಕೆಗಳ ಮೂಲಕ ಪ್ರದರ್ಶನ ಮಾಡುತ್ತಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ‘ಜೆಡಿಎಸ್ ಪುಟಗೋಸಿ ಪಕ್ಷ’ ಎಂಬ ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾನ ಮುಚ್ಚಿಕೊಳ್ಳಲು ಎಲ್ಲರಿಗೂ ಪುಟಗೋಸಿ ಬೇಕು. ಮನುಷ್ಯ ಎಷ್ಟೇ ಶ್ರೀಮಂತನಾದರೂ ಪುಟಗೋಸಿ ಇಲ್ಲವೆಂದರೆ ಮಾನ ಕಳೆದುಕೊಳ್ಳಬೇಕಾಗುತ್ತದೆ. ಆದರೆ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಸಂಸ್ಕೃತಿ ಉಳಿಸುವ ಸಂಕಲ್ಪ ತೊಟ್ಟ ಪಕ್ಷದವರಾದ ಹೆಗಡೆ ತಮ್ಮ ಅಭಿರುಚಿ ಎಂತಹದ್ದು ಎಂಬುದನ್ನು ಪದೇ ಪದೇ ಸಾರ್ವಜನಿಕವಾಗಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.