×
Ad

‘ಕಳಪೆ ಬಿತ್ತನೆ ಬೀಜ’ ಪೂರೈಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-06-02 19:58 IST

ಬೆಂಗಳೂರು, ಜೂ. 2: ರಾಜ್ಯದಲ್ಲಿ ಮುಂಗಾರು ಉತ್ತಮವಾಗಿ ಆರಂಭವಾಗಿದ್ದು, ರೈತಾಪಿ ವರ್ಗಕ್ಕೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ವಿತರಿಸಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಶನಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕೃಷಿ, ತೋಟಗಾರಿಕೆ ಮತ್ತು ರೇಶ್ಮೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಈ ಬಾರಿ ಮಳೆಗಾಲಕ್ಕೆ ಮುನ್ನವೇ ಶೇ.51ರಷ್ಟು ಹೆಚ್ಚು ಮಳೆಯಾಗಿದ್ದು, ಮಳೆಗಾಲ ಮೂರುದಿನ ಮುಂಚಿತವಾಗಿ ಆರಂಭವಾಗಿದ್ದು ಇನ್ನೂ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ರೈತರ ಕೃಷಿ ಚಟುವಟಿಕೆಗೆ ಯಾವುದೇ ಅಡ್ಡಿಯಾಗಬಾರದು. ಬಿತ್ತನೆ ಬೀಜ, ರಸಗೊಬ್ಬರ ಪೂರೈಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಕಳಪೆ ಬೀಜ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಿದರು.

ಇಸ್ರೇಲ್ ಮಾದರಿ ಕೃಷಿ: ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕೆ ‘ಇಸ್ರೇಲ್ ಮಾದರಿ ಕೃಷಿ ಪದ್ಧತಿ’ಯನ್ನು ಮಂಡ್ಯದ ವಿಸಿ ಫಾರಂನಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ರಫ್ತು ಆಧರಿತ ಪದ್ಧತಿಯೇ ಇಸ್ರೇಲ್ ಮಾದರಿ. ರೈತರು ಬೆಲೆ ಕುಸಿತದಿಂದ ಪಾರಾಗಲು ಈ ಪದ್ಧತಿ ಅನುಕೂಲವಾಗಲಿದೆ ಎಂದ ಅವರು, ಈ ಸಂಬಂಧ ಇಸ್ರೇಲ್‌ನ ಸಂಶೋಧಕರಿಂದ ಕೃಷಿ ಅಧಿಕಾರಿಗಳಿಗೆ ಶೀಘ್ರದಲ್ಲೆ ಕಾರ್ಯಾಗಾರವೊಂದನ್ನು ಏರ್ಪಡಿಸಲಾಗುವುದು ಎಂದರು.

ವಿಸಿ ಫಾರಂನಲ್ಲಿರುವ 900 ಎಕರೆ ಪ್ರದೇಶದಲ್ಲಿ ಇಸ್ರೇಲ್ ಕೃಷಿ ಪದ್ಧತಿಯನ್ನು ಪ್ರಾಯೋಗಿಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದ ಕುಮಾರಸ್ವಾಮಿ, ಅನಂತರ ಹಂತ-ಹಂತವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ನೀಲನಕ್ಷೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ತೋಟಗಾರಿಕೆಯಲ್ಲೂ ಆಧುನಿಕತೆಯನ್ನು ತರಬೇಕು. ನಾವೂ ಈ ಕೃಷಿಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದ ಅವರು, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಕ್ಕರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಮುಖ್ಯಮಂತ್ರಿ ಕಾರ್ಯದರ್ಶಿ ಲಕ್ಷ್ಮಿನಾರಾಯಣ್, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

‘ಬೆಂಗಳೂರು ನಗರದಲ್ಲಿ ಮಳೆ ಹಾನಿ ತಪ್ಪಿಸಲು, ರಾಜಕಾಲುವೆ ಒತ್ತುವರಿ ತೆರವು ಸೇರಿ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಜೂ.4ರಂದು ಬಿಬಿಎಂಪಿ, ಬಿಡಿಎ, ಜಲಮಂಡಳಿ ಅಧಿಕಾರಿಗಳ ಸಭೆ ನಡೆಸಲಾಗುವುದು’
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News