×
Ad

'ಕಾಲ' ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ: ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ

Update: 2018-06-02 20:08 IST

ಬೆಂಗಳೂರು, ಜೂ.2: ಕಾವೇರಿ ವಿಚಾರದಲ್ಲಿ ರಾಜ್ಯದ ವಿರುದ್ಧವಾಗಿ ಮಾತನಾಡಿರುವ ನಟ ರಜನೀಕಾಂತ್ ಅಭಿನಯದ ಕಾಲ ಸಿನೆಮಾದ ಬಿಡುಗಡೆಗೆ ಯಾವುದೆ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲವೆಂದು ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ರಜನಿಕಾಂತ್ ಅಭಿನಯದ ಕಾಲ ಸಿನೆಮಾ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದೆಂದು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಅವರು, ನಟ ರಜನಿಕಾಂತ್ ಕನ್ನಡ ವಿರೋಧಿಯಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಲ ಸಿನೆಮಾ ಬಿಡುಗಡೆಯಾದರೆ ರಾಜ್ಯಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಟ ರಜನೀಕಾಂತ್‌ಗೆ ಕನ್ನಡಿಗರ ನೆಲ, ಜಲದ ಬಗ್ಗೆ ಬೇಕಾದಂತೆ ಮಾತನಾಡುವ ಹಕ್ಕು ಕೊಟ್ಟವರು ಯಾರು. ತಮ್ಮ ಸ್ವಾರ್ಥಕ್ಕೆ ಕಾವೇರಿ ವಿಷಯವನ್ನು ಬಳಸಿಕೊಳ್ಳುವ ಪ್ರಯತ್ನಿಸುವವರು ಯಾರೆ ಆದರೂ ಅವರ ವಿರುದ್ಧ ಕನ್ನಡ ರಕ್ಷಣಾ ವೇದಿಕೆ ಪ್ರತಿಭಟನೆ ಮಾಡಲಿದೆ. ಹೀಗಾಗಿ ನಟ ರಜನೀಕಾಂತ್‌ರ ಕಾಲ ಸಿನೆಮಾ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡುವುದಿಲ್ಲವೆಂದು ಅವರು ಹೇಳಿದರು.

ನಟ ರಜನೀಕಾಂತ್ ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ವಿರುದ್ಧವಾಗಿ ಮಾತನಾಡಿರುವುದರ ಕುರಿತು ಕ್ಷಮೆ ಯಾಚಿಸಲಿದ್ದಾರೆ. ಹೀಗಾಗಿ ಕಾಲ ಸಿನೆಮಾ ಬಿಡುಗಡೆಗೆ ಅಡ್ಡಿ ಪಡಿಸಬೇಡಿ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿ ಬರುತ್ತಿವೆ. ಆದರೆ, ಕ್ಷಮೆ ಯಾಚಿಸಿದರು ಈ ಬಾರಿ ಕಾಲ ಸಿನೆಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ. ಕನ್ನಡಿಗರನ್ನು ಕೆಣಕಿದರೆ ಏನಾಗಲಿದೆ ಎಂಬುದನ್ನು ಅವರಿಗೆ ತಿಳಿಸಬೇಕಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಕನ್ನಡ ರಕ್ಷಣಾ ವೇದಿಕೆಯ ಜೊತೆ ನೂರಾರು ಕನ್ನಡ ಪರ ಸಂಘಟನೆಗಳು, ಸಿನೆಮಾ ನಿರ್ದೇಶಕರು, ನಿರ್ಮಾಪಕರು, ವಿತರಕರು ಹಾಗೂ ನಾಡಿನ ಜನತೆ ನಮ್ಮಂದಿಗೆ ಇರಲಿದ್ದಾರೆ. ಹೀಗಾಗಿ ‘ಕಾಲ’ ಸಿನಿಮಾವನ್ನು ಬಿಡುಗಡೆಗೆ ಪ್ರಯತ್ನಿಸಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News