ಅಕ್ರಮಗಳ ವೀಡಿಯೊ ನೀಡಿದರೆ 1ಲಕ್ಷ ರೂ. ಬಹುಮಾನ: ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ

Update: 2018-06-02 15:01 GMT

ಬೆಂಗಳೂರು, ಜೂ.2: ಚುನಾವಣಾ ಆಯೋಗ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ತಡೆಯಲು ವಿಫಲವಾಗಿದೆ. ಹೀಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ಹಣ ಅಥವಾ ಉಡುಗೊರೆ ಹಂಚುವ ವಿಡಿಯೋ ದೃಶ್ಯ ಸೆರೆ ಹಿಡಿದು ಕೊಟ್ಟರೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಪ್ರಕಟಿಸಿದ್ದಾರೆ.

ಶನಿವಾರ ಜಯನಗರ 4ನೇ ಬ್ಲಾಕ್‌ನ ತಮ್ಮ ಕಚೇರಿ ಸಮೀಪದ ರಸ್ತೆಯಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಯನಗರ ಕ್ಷೇತ್ರದಲ್ಲಿ ಬಿಜೆಪಿಯು ಮತದಾರರಿಗೆ ಆಮಿಷ ಒಡ್ಡುತ್ತಿರುವ ಬಗ್ಗೆ ದೂರು ಕೇಳಿಬಂದಿದ್ದು, ಚುನಾವಣಾ ಅಕ್ರಮಗಳು ಹೆಚ್ಚಾಗುತ್ತಿದ್ದರೂ ಆಯೋಗ ಮತ್ತು ಪೊಲೀಸರು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಅಕ್ರಮಗಳಿಗೆ ಸರಕಾರಿ ವಾಹನಗಳನ್ನು ಬಳಸುತ್ತಿರುವ ಅನುಮಾನವಿದ್ದು, ಕ್ಷೇತ್ರದಲ್ಲಿ ಸಂಚರಿಸುವ ಚುನಾವಣಾ ಆಯೋಗದ ವಾಹನಗಳು, ಪೊಲೀಸ್ ವಾಹನಗಳ ತಪಾಸಣೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಆಮಿಷ ಒಡ್ಡುತ್ತಿರುವ ವಿಡಿಯೋ ರವಾನಿಸಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಕ್ಷೇತ್ರದಲ್ಲಿ ಕೆಲವು ಪಕ್ಷದ ಅಭ್ಯರ್ಥಿಗಳು ಹಣ ಹಾಗೂ ಉಡುಗೊರೆ ಹಂಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಸಹ ಒಂದು ವೋಟಿಗೆ 2,888 ರೂ. ನಗದು, ಕುಕ್ಕರ್, ನಿಕ್ಕರ್, ಸೀರೆ ಹಂಚಲು ಅವಕಾಶ ನೀಡುವಂತೆ ಕೋರಿದ್ದೆ. ಆದರೆ, ಇದು ನಿಯಮಬಾಹಿರವೆಂದು ತಿಳಿಸಿರುವ ಆಯೋಗವು ಮನವಿಯನ್ನು ತಿರಸ್ಕರಿಸಿದೆ ಎಂದರು.

ನಾನು ಸಲ್ಲಿಸಿದ ಮನವಿಯಿಂದಾಗಿ ಚುನಾವಣಾ ಆಯೋಗದ ಸಮಯ ವ್ಯರ್ಥವಾಗುತ್ತಿದೆ ಎಂದು 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 123 (1) ಹಾಗೂ ಐಪಿಸಿ ಕಲಂ 171ಬಿ ಹಾಗೂ 171ಇ ಅಡಿ ಮತದಾರರಿಗೆ ಆಮಿಷ ಒಡ್ಡುವುದು ಅಪರಾಧವಾಗಿದ್ದು, ಒಂದು ವರ್ಷ ಜೈಲುಶಿಕ್ಷೆ ಅಥವಾ ದಂಡ ಇಲ್ಲವೇ ಎರಡನ್ನೂ ವಿಧಿಸಲು ಅವಕಾಶವಿದೆ ಎಂದು ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ ಎಂದು ಹೇಳಿದರು.

ಚುನಾವಣಾ ಆಯೋಗದ ಜವಾಬ್ದಾರಿ ಏನು ಎಂಬುದನ್ನು ಪಕ್ಷೇತರ ಅಭ್ಯರ್ಥಿಯಾಗಿ ತಿಳಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದ ಅವರು, ಕಳೆದ ಗುರುವಾರ ಪಟ್ಟಾಭಿರಾಮನಗರದ ಮಾರೇನಹಳ್ಳಿ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಸೀರೆ ಹಂಚುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಕ್ಕಾಗಿ ಕಿಡಿಗೇಡಿಯೊಬ್ಬ ಫೋನ್ ಕಸಿದುಕೊಂಡು ಪರಾರಿಯಾದ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ ಎಂದು ದೂರಿದರು.

ಶುಕ್ರವಾರ ಸಂಜೆ ಸಾರಕ್ಕಿ ಗ್ರಾಮದಲ್ಲಿ ಬಿಜೆಪಿ ವತಿಯಿಂದ 500ರಿಂದ 1 ಸಾವಿರ ಜನರಿಗೆ ಹಣ ಹಂಚಿದ್ದಾರೆ. ಜನ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿ ಹಾಗೂ ಬಿಜೆಪಿಯ ಪ್ರಹ್ಲಾದ್ ಬಾಬು ಅವರು ತಾವು ಹಾಗೂ ತಮ್ಮ ಪಕ್ಷ ಯಾರಿಗೂ ಆಮಿಷ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದು ಎದೆ ಮುಟ್ಟಿಕೊಂಡು ಸಾರ್ವಜನಿಕವಾಗಿ ಹೇಳಲಿ.
-ರವಿಕೃಷ್ಣಾರೆಡ್ಡಿ, ಪಕ್ಷೇತರ ಅಭ್ಯರ್ಥಿ, ಜಯನಗರ ವಿಧಾನಸಭಾ ಕ್ಷೇತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News