ತನ್ನ ಹೆಸರಿಗೆ 'ಸಿನ್ಹ್' ಎಂದು ಸೇರಿಸಿದ ಹಿಂದುಳಿದ ವರ್ಗದ ಯುವಕನಿಗೆ ಥಳಿಸಿದರು!

Update: 2018-06-03 09:37 GMT

ಪಾಲನ್‍ಪುರ (ಗುಜರಾತ್), ಜೂ.3: ಹಿಂದುಳಿದ ವರ್ಗದ ಯುವಕನೊಬ್ಬ ತನ್ನ ಹೆಸರಿನ ಜತೆಗೆ 'ಸಿನ್ಹ್' ಎಂದು ಸೇರಿಸಿದ್ದಕ್ಕೆ ಮೇಲ್ವರ್ಗದ ಜನ ಆತನನ್ನು ಮನಸೋ ಇಚ್ಛೆ ಥಳಿಸಿದ ಅಮಾನುಷ ಘಟನೆ ಗುಜರಾತ್ ನಲ್ಲಿ ನಡೆದಿದೆ. ರಾಜ್ಯದಲ್ಲಿ ಕಳೆದ ಎರಡು ವಾರದಲ್ಲಿ ನಡೆಯುತ್ತಿರುವ ಮೂರನೇ ಇಂಥ ಘಟನೆ ಇದಾಗಿದೆ.

ಬನಸ್ಕಾಂತ ಜಿಲ್ಲೆಯ ಕಾಂಕ್ರೇಜ್ ತಾಲೂಕು ಉನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಹಿಮತ್‍ಸಿನ್ಹ್ ಚೌಹಾಣ್ (20) ಎಂಬಾತ ಕೋಲಿ ಠಾಕೂರ್ ಸಮಾಜಕ್ಕೆ ಸೇರಿದವನಾಗಿದ್ದು, ಫೇಸ್‍ಬುಕ್‍ನಲ್ಲಿ ತನ್ನ ಹೆಸರಿನ ಜತೆಗೆ ಸಿನ್ಹ್ ಎಂದು ಸೇರಿಸಿದ್ದ. ಇದರಿಂದ ಕೋಪಗೊಂಡ ದರ್ಬಾರ್ ಸಮುದಾಯದ ಮಂದಿ ಈತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 394, 395 ಮತ್ತು 506ಬಿ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಸಬ್ ಇನ್‍ಸ್ಪೆಕ್ಟರ್ ಎ.ಕೆ.ಭರ್ವಾದ್ ಹೇಳಿದ್ದಾರೆ. "ಚೌಹಾಣ್‍ನ ಫೇಸ್‍ಬುಕ್ ಪೇಜ್‍ನಲ್ಲಿ ಸಿನ್ಹ್ ಎಂದು ತನ್ನ ಹೆಸರಿನ ಜತೆ ಸೇರಿಸಿಕೊಂಡಿದ್ದನ್ನು ಗಮನಿಸಿದ ದರ್ಬಾರ್ ಸಮುದಾಯದ ಗುಂಪು ಆತನ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.
ಚೌಹಾಣ್‍ನ ಹೆಸರಿನ ಜತೆಗೆ ಶಾಲಾ ಪ್ರಮಾಣಪತ್ರದಲ್ಲಿ ಕೂಡಾ ಸಿನ್ಹಾ ಎಂದು ಸೇರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಇದಕ್ಕೂ ಮುನ್ನ ಮೇ 27ರಂದು ಇದೇ ಜಿಲ್ಲೆಯ ಗೌಡ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಧಾರ್ಮಿಕ ಕಾರ್ಯಕ್ರಮಕ್ಕೆ ಸಿದ್ಧಪಡಿಸಿದ್ದ ಆಹ್ವಾನಪತ್ರಿಕೆಯಲ್ಲಿ ತನ್ನ ಹೆಸರಿನ ಜತೆಗೆ ಸಿನ್ಹ್ ಎಂದು ಸೇರಿಸಿದ್ದಕ್ಕೆ ಆತನನ್ನು ಹೊಡೆದು ಬಲವಂತವಾಗಿ ಮೀಸೆ ಬೋಳಿಸಲಾಗಿತ್ತು. 22ರಂದು ಕೂಡಾ ಅಹ್ಮದಾಬಾದ್ ಜಿಲ್ಲೆಯ ಧೋಕ್ಲಾದಲ್ಲಿ ದಲಿತನೊಬ್ಬ ತನ್ನ ಹೆಸರಿನ ಜತೆ ಸಿನ್ಹ್ ಎಂದು ಸೇರಿಸಿದ್ದಕ್ಕಾಗಿ ದಲಿತರ ಗುಂಪಿನ ಜತೆ ರಜಪೂತರು ತಗಾದೆ ತೆಗೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News