ರಂಗಭೂಮಿ ಕುರಿತ ಕೃತಿಗಳು ಹೆಚ್ಚಾಗಲಿ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

Update: 2018-06-03 12:44 GMT

ಬೆಂಗಳೂರು: ಜೂ, 3: ಸಾಹಿತ್ಯ ವಲಯದಲ್ಲಿ ರಂಗಭೂಮಿಗೆ ಸಂಬಂಧಿಸಿದ ಕೃತಿಗಳು ವಿರಳವಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕಾದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಿಸಿದರು.

ರವಿವಾರ ಸಿರಿವರ ಕಲ್ಚರಲ್ ಅಕಾಡೆಮಿ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಲೇಖಕ ಡಾ.ರಾಜಶೇಖರ ಮಠಪತಿ ‘ರಕ್ತ ಮತ್ತು ರಾಜಕಾರಣ’, ಕೆ.ಎ.ರಾಮಕೃಷ್ಣ ಮೂರ್ತಿರವರ ‘ಬಂಧು ಮಿತ್ರರು’ ಹಾಗೂ ಕವಿ ಎಸ್. ಮಂಜುನಾಥ್‌ರವರ ‘ಏಳು ತಂತಿ ಏಕನಾದ’ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅಂಕಣ ಬರಹಕ್ಕೆ ಸಂಬಂಧಿಸಿದ ಕೃತಿಗಳು ಹೆಚ್ಚಾಗಿ ಬಿಡುಗಡೆಯಾಗುತ್ತಿವೆ. ಇದೇ ಮಾದರಿಯಲ್ಲಿ ರಂಗಭೂಮಿಗೆ ಪೂರಕವಾದ ಕೃತಿಗಳು ಪ್ರಕಟಗೊಳ್ಳಲಿ. ಆ ಮೂಲಕ ಕಲಾವಿದರಿಗೆ, ಕಲಾ ವಿದ್ಯಾರ್ಥಿಗಳಿಗೆ ರಂಗಭೂಮಿ ಕುರಿತು ಮತ್ತಷ್ಟು ಆಸಕ್ತಿ ಹೆಚ್ಚಾಗಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ಅವರು ಆಶಿಸಿದರು.

ಕನ್ನಡ ರಂಗಭೂಮಿಗೆ ಹಾಗೂ ಸಮಾಜಕ್ಕೆ ಬೀದಿ ನಾಟಕಗಳು ಕೊಡುಗೆ ಅಪಾರವಾಗಿದೆ. ಭಾರತೀಯ ಸಮಾಜವು ಒಂದೊಂದು ಜಾತಿಗೆ ಒಂದೊಂದು ಬೀದಿಗಳಾಗಿ ಒಡೆದು ಹೋಗಿರುವ ಸಂದರ್ಭದಲ್ಲಿ ಈ ಬೀದಿಗಳನ್ನು ಒಂದು ಗೂಡಿಸುವ ಕಾಯಕವನ್ನು ಬೀದಿ ನಾಟಕಗಳು ಮಾಡುತ್ತಿವೆ. ಇದರ ಸಂಪೂರ್ಣ ಯಶಸ್ಸು ಸಮುದಾಯ ರಂಗ ತಂಡಕ್ಕೆ ಸೇರಬೇಕು ಎಂದು ಅವರು ಅಭಿನಂದಿಸಿದರು.

ಹಿಂದಿನ ದಿನಗಳಲ್ಲಿ ಜನತೆಗೆ ಪ್ರಜಾಪ್ರಭುತ್ವದ ಬಗ್ಗೆ ಅಪಾರ ನಂಬಿಕೆಯಿತ್ತು. ಆದರೆ, ಇವಿಎಂ ಯಂತ್ರಗಳು ಆ ನಂಬಿಕೆಗಳನ್ನು ಹುಸಿ ಗೊಳಿಸುತ್ತಿವೆ. ಮಾನವ ನಿರ್ಮಿತವಾದ ಯಂತ್ರಗಳನ್ನು ಸಂಪೂರ್ಣವಾಗಿ ಅವಲಂಭಿಸುವುದು ಸರಿಯಲ್ಲ. ಇದರಿಂದ ಅನುಕೂಲಕ್ಕಿಂತ ಅನಾನುಕುಲಗಳೇ ಹೆಚ್ಚಾಗುತ್ತಿರುವ ಬೆಳವಣಿಗೆ ಕಾಣುತ್ತಿದ್ದೇವೆ ಎಂದು ಅವರು ಆಂತಕ ವ್ಯಕ್ತಪಡಿಸಿದರು.

2000 ಇಸವಿಯ ನಂತರದಲ್ಲಿ ಹುಟ್ಟಿದ ಯುವಜನತೆಯ ಮಸ್ಥಿತಿಯನ್ನು ಗಮನಿಸಿದರೆ ಬಹಳ ಆತಂಕ ಉಂಟಾಗುತ್ತದೆ. ಅವರಿಗೆ ದೇಶದ ಚರಿತ್ರೆ, ಬದುಕು, ಬಡತನ, ಜಾತಿಯ ಅವಮಾನದ ಅನುಭವ ಇಲ್ಲವಾಗಿದೆ. ಹಸಿ ಸುಳ್ಳುಗಳನ್ನೇ ನಿಜವೆಂದು ನಂಬುವ ಸ್ಥಿತಿಯಲ್ಲಿದ್ದಾರೆ. ಈ ಸಮುದಾಯದಲ್ಲೂ ಶೇ.5ರಷ್ಟು ಮಂದಿ ವಾಸ್ತವ ಪರಿಸ್ಥಿತಿಯನ್ನು ಅರಿಯುವ ಮನಸ್ಥಿತಿಯನ್ನು ಇಟ್ಟುಕೊಂಡಿರುವುದು ಒಳ್ಳೆಯ ಬೆಳವಣಿಗೆಯೆಂದು ಅವರು ಅಭಿಪ್ರಾಯಿಸಿದರು.

ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಾಯಣ್ಣ ಮಾತನಾಡಿ, ಕೋಟ್ಯಂತರ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಲ್ಲಿ ಎಣಿಸಲಾರದಷ್ಟು ಪ್ರತಿಭಾವಂತರಿದ್ದಾರೆ. ಅವರೆಲ್ಲರನ್ನು ಗೌರವಿಸುವುದು ಸಾಹಿತ್ಯ ಪರಿಷತ್‌ನ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನನ್ನ ಕಾಲಾವಧಿಯಲ್ಲಿ ಸಾಧ್ಯವಿರುವಷ್ಟು ಪ್ರತಿಭಾವಂತರಿಗೆ ಸನ್ಮಾನಿಸುವ ಕೆಲಸದಲ್ಲಿ ತೊಡಗಿದ್ದೇನೆಂದು ತಿಳಿಸಿದರು.

ವಿಜಯನಗರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಲಿಂಗಮಾರಯ್ಯ, ರಂಗ ನೇಪಥ್ಯದ ಸಂಪಾದಕ ಗುಡಿಹಳ್ಳಿ ನಾಗರಾಜು, ಹಿರಿಯ ರಂಗಕರ್ಮಿ ಶಶಿಧರ್ ಭಾರೀಘಾಟ್ ಅವರು ಕೃತಿ ಕುರಿತು ಮಾತನಾಡಿದರು. ಪರಿಷತ್ತಿನ ಬಿ.ಶೃಂಗೇಶ್ವರ್, ಪಿ.ಅಂಜನ್‌ಕುಮಾರ್, ಎಂ.ನರಸಿಂಹ, ಕೆ.ಕೃಷ್ಣಮೂರ್ತಿ ಪೂಜಾರಿ ಪಾಳ್ಯ ಮತ್ತಿತರರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News