×
Ad

ಸಮಾಜ ಪರಿವರ್ತನೆಗೆ ಮಾಧ್ಯಮಗಳ ಪಾತ್ರ ಮುಖ್ಯ: ಎಚ್.ಎಸ್.ದೊರೆಸ್ವಾಮಿ

Update: 2018-06-03 17:31 IST

ಬೆಂಗಳೂರು, ಜೂ. 3: ಪತ್ರಿಕೆಗಳು ಹಾಗೂ ಟಿವಿ ಚಾನಲ್‌ಗಳು ಉತ್ತಮವಾದ ಕೆಲಸಗಳನ್ನು ಮಾಡಿದಾಗ ಮಾತ್ರ ಈ ಸಮಾಜ ಪರಿವರ್ತನೆಯಾಗಲು ಹಾಗೂ ಹಲವು ಸಮಸ್ಯೆಗಳು ಪರಿಹಾರವಾಗಲು ಸಾಧ್ಯವಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಶಯ ವ್ಯಕ್ತಪಡಿಸಿದ್ದಾರೆ.

ರವಿವಾರ ಕಂದಾಯ ಭವನದ ಕೆಯುಡಬ್ಲೂಜೆ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಎಚ್.ಎಸ್.ದೊರೆಸ್ವಾಮಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ದೇಶದಲ್ಲಿ ವ್ಯಾಪಕವಾದ ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಈ ಎಲ್ಲ ಸಮಸ್ಯೆಗಳಿಗೆ ಕಡಿವಾಣ ಹಾಕಲು ಪತ್ರಿಕೆಗಳು ಹಾಗೂ ಟಿವಿ ಚಾನಲ್‌ಗಳು ಎಚ್ಚರಿಕೆಯಿಂದ ಹಾಗೂ ಉತ್ತಮವಾದ ಕೆಲಸಗಳನ್ನು ಮಾಡಬೇಕೆಂದು ಆಸೆಯ ವ್ಯಕ್ತಪಡಿಸಿದರು.

ಮೈಸೂರು ಸಂಸ್ಥಾನ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ನಾನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಪೌರವಾಣಿ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದ ಅನುಭವವೂ ಇದೆ. ಹೀಗಾಗಿಯೇ ಸ್ವಾತಂತ್ರ ಹೋರಾಟದಲ್ಲಿ ಹಾಗೂ ಕ್ವೀಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಳ್ಳಲು ಧೈರ್ಯ ಬಂತು ಎಂದು ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನ ಕಸವಿಲೇವಾರಿಯ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಬೇಕು. ಅಲ್ಲದೆ, ಮಾಧ್ಯಮಗಳು ಉದ್ಯಮಿಗಳ ಬದಲು ಸಮಾಜಮುಖಿ ಚಿಂತನೆ ಇರುವವರನ್ನು ಪ್ರೋತ್ಸಾಹಿಸಬೇಕು. ಅವರನ್ನೆ ಜನಪ್ರತಿನಿಧಿಗಳನ್ನಾಗಿಸಲು ಶ್ರಮಿಸಬೇಕೆಂದು ಹೇಳಿದರು.

ಹಿರಿಯ ಪತ್ರಕರ್ತ ಮಹದೇವಪ್ರಸಾದ್ ಮಾತನಾಡಿ, ಎಚ್.ಎಸ್.ದೊರೆಸ್ವಾಮಿ ಅವರು ಈ ದೇಶದಿಂದ ಬ್ರೀಟಿಶ್‌ರನ್ನು ಹೋಗಲಾಡಿಸಲು ಹೋರಾಡಿದ್ದಾರೆ. ಭೂಗಳ್ಳರ ವಿರುದ್ಧ, ಬೆಂಗಳೂರಿನ ಕಸದ ಸಮಸ್ಯೆ ಹೋಗಲಾಡಿಸಲು ಸೇರಿ ಹಲವು ಸಮಸ್ಯೆಗಳ ವಿರುದ್ಧ ಹೋರಾಟವನ್ನು ನಡೆಸಿ ಯಶಸ್ವಿಯಾಗಿದ್ಧಾರೆ ಎಂದು ಹೇಳಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತೆ ಪತ್ರಕರ್ತರ ಸಮ್ಮೇಳನವನ್ನೂ ನಡೆಸುವ ಅವಶ್ಯಕತೆ ಇದ್ದು, ಈ ಸಮ್ಮೇಳನಕ್ಕೆ ಎಚ್.ಎಸ್.ದೊರೆಸ್ವಾಮಿ ಅವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕೆಯುಡಬ್ಲೂಜೆ ಅಧ್ಯಕ್ಷ ಎನ್.ರಾಜು ಮಾತನಾಡಿ, ಪತ್ರಕರ್ತರ ಸಮ್ಮೇಳನವನ್ನು ಆಯೋಜನೆ ಮಾಡುವ ಮನಸ್ಸಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಶಿವಾನಂದ ತಗಡೂರು, ಮತ್ತಿಕೆರೆ ಜಯರಾಂ, ಪದಾಧಿಕಾರಿಗಳಾದ ಡಾ.ಉಮೇಶ್ವರ್, ಲೋಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News