ಬೆಂಗಳೂರು: ಆರು ಬೋಗಿಯ ಮೆಟ್ರೊ ರೈಲು ಸಂಚಾರ ಶೀಘ್ರ ಆರಂಭ

Update: 2018-06-03 12:39 GMT

ಬೆಂಗಳೂರು, ಜೂ.3: ಆರು ಬೋಗಿಗಳನ್ನೊಳಗೊಂಡ ಮೆಟ್ರೊ ರೈಲು ಸಂಚಾರವು ಜೂನ್ ಅಂತ್ಯಕ್ಕೆ ಆರಂಭವಾಗಲಿದೆ ಬಿಎಂಆರ್‌ಸಿಎಲ್ ತಿಳಿಸಿದೆ.

ಹೊಸ ಮೂರು ಬೋಗಿಗಳನ್ನು ಈಗಾಗಲೆ ಇರುವ ಹಳೆಯ ಮೂರು ಬೋಗಿಯ ಮೆಟ್ರೊ ರೈಲಿಗೆ ಅಳವಡಿಸುವುದು, ತಂತ್ರಾಂಶ ಅಳವಡಿಕೆ, ವಿವಿಧ ಪರೀಕ್ಷೆಗಳು ಸೇರಿದಂತೆ ಎಲ್ಲ ಪ್ರಕ್ರಿಯೆಗಳು ನಡೆಯಲು ಹಾಗೂ ಪರೀಕ್ಷಾರ್ಥ ಸಂಚಾರ ಹಾಗೂ ಮೇಲ್ಮಟ್ಟದ ಅಧಿಕಾರಿಗಳಿಂದ ಅನುಮತಿ ಪಡೆಯಲು ತಡವಾಗಿದೆ. ಆದರೆ, ಜೂನ್ ಅಂತ್ಯಕ್ಕೆ ಆರು ಬೋಗಿಯ ರೈಲು ಸಂಚಾರ ನಡೆಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದ್ದು, ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

ಒಂದು ಬೋಗಿಯಲ್ಲಿ 325 ಮಂದಿಯಂತೆ ಮೂರು ಬೋಗಿಯ ರೈಲಿನಲ್ಲಿ 975 ಜನರು ಪ್ರಯಾಣಿಸಬಹುದು. ಆರು ಬೋಗಿಯ ರೈಲಿನಲ್ಲಿ 1,950 ಮಂದಿ ಪ್ರಯಾಣಿಸಲು ಸಾಧ್ಯ. ಮೊದಲ ಆರು ಬೋಗಿಯ ರೈಲು ಬೈಯ್ಯಪ್ಪನಹಳ್ಳಿ-ಮೈಸೂರು ಮಾರ್ಗದಲ್ಲಿ ಸಂಚರಿಸಿದೆ. ಒಂದು ನಿಲ್ದಾಣದಿಂದ ಹೊರಟ ರೈಲು ಅದೇ ನಿಲ್ದಾಣಕ್ಕೆ ಮತ್ತೆ ಬರಲು 40 ನಿಮಿಷ ಬೇಕಾಗುತ್ತದೆ.

ರೈಲ್ವೆ ಮಂಡಳಿಯ ಅನುಮತಿ ಬೇಕು: ಆರು ಬೋಗಿಯ ರೈಲಿನ ಸಂಚಾರದ ಕುರಿತು ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿದ ಬಳಿಕ ವರದಿ ಸಿದ್ಧಪಡಿಸಿ ರೈಲ್ವೆ ಮಂಡಳಿಗೆ ಕಳುಹಿಸಿಕೊಟ್ಟಿದ್ದಾರೆ. ಈಗ ರೈಲ್ವೆ ವುಂಡಳಿಯ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಆರು ಬೋಗಿ ರೈಲನ್ನು ಓಡಿಸಲು ಮಂಡಳಿಯು ಅನುಮತಿ ನೀಡಿದರೆ ವಾಣಿಜ್ಯ ಸಂಚಾರ ಆರಂಭಿಸಬಹುದು. ರೈಲ್ವೆ ಮಂಡಳಿಯು ಅನುಮತಿ ನೀಡಬಹುದು ಇಲ್ಲವೆ ರೈಲ್ವೆ ಸುರಕ್ಷತಾ ಆಯುಕ್ತರಿಗೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಸೂಚಿಸಬಹುದು. ಹೀಗಾಗಿ ಇವೆಲ್ಲ ಪ್ರಕ್ರಿಯೆಗಳಿಗೆ ಎಷ್ಟು ದಿನಗಳ ಬೇಕಾಗಲಿದೆ ಎಂಬ ಖಾತ್ರಿ ಇಲ್ಲ. ಆದರೂ ಜೂನ್ ಅಂತ್ಯದಲ್ಲಿ ಆರು ಬೋಗಿ ರೈಲನ್ನು ಆರಂಭಿಸುತ್ತೇವೆಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News