ಗಿರಡ್ಡಿ ಗೋವಿಂದರಾಜ್ ರ ವ್ಯಕ್ತಿತ್ವ ದೊಡ್ಡದು: ಪ್ರೊ.ಚಂಪಾ

Update: 2018-06-03 13:10 GMT

ಬೆಂಗಳೂರು, ಜೂ.3: ಕಳೆದ 60 ವರ್ಷಗಳ ಅವಧಿಯಲ್ಲಿ ಏನೆಲ್ಲಾ ಚಳುವಳಿ ಮತ್ತು ಹೋರಾಟಗಳು ನಡೆದರು ಸಕ್ರಿಯವಾಗಿ ಭಾಗವಹಿಸದೇ ತಟಸ್ಥವಾಗಿದ್ದ ಗಿರಡ್ಡಿ ಗೋವಿಂದರಾಜ್ ಅವರ ವ್ಯಕ್ತಿತ್ವ ದೊಡ್ಡದು ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ (ಚಂಪಾ) ಹೇಳಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಹಿತಿ ಹಾಗೂ ಕಲಾದರ ವೇದಿಕೆ ವತಿಯಿಂದ ಆಯೋಜಿಸಿದ್ದ, ‘ನಮ್ಮೊಳಗಿನ ಗಿರಡ್ಡಿ ಮರೆಯಲಾಗದ ಚೇತನ’ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಕಾಕ್ ಚಳವಳಿಯಿಂದ ಕೋಮುವಾದ ವಿರೋಧಿ ಚಳುವಳಿಯವರೆಗೂ ನಡೆದಿರುವ ಯಾವುದೇ ಹೋರಾಟದಲ್ಲಿಯೂ ಪಾಲ್ಗೊಳ್ಳಲು ಗಿರಡ್ಡಿಯವರಿಗೆ ಹಿಂಜರಿಕೆ ಇತ್ತು. ಅವರು ಯಾವುದೇ ಸಿದ್ಧಾಂತಗಳಿಗೆ ಕಟ್ಟು ಬೀಳದ ತಟಸ್ಥ ಮನೋಭಾವವುಳ್ಳವರಾಗಿದ್ದರು ಎಂದು ಸ್ಮರಿಸಿದರು.

ಪಡಶೆಟ್ಟಿ ಮತ್ತು ಗಿರಡ್ಡಿಯವರೊಂದಿಗೆ 1947ರಿಂದ ಒಡನಾಟವಿತ್ತು. ಸಂಕ್ರಮಣ ಪತ್ರಿಕೆಯಿಂದಾಗಿ ನಮ್ಮ ಒಡನಾಟ ಆರಂಭವಾಯಿತು. ನಾನು ಸಂಕ್ರಮಣ ಪತ್ರಿಕೆಯ ಮೊದಲ ವರ್ಷದ ಜವಾಬ್ದಾರಿ ಹೊತ್ತಿದ್ದೆ. ಆಚಾರ ವಿಚಾರಗಳಲ್ಲಿ ಗಿರಡ್ಡಿ, ಪಡಶೆಟ್ಟಿ ಮತ್ತು ನಾನು ಭಿನ್ನವಾಗಿದ್ದೆವು. ಸಂಕ್ರಮಣ ಪತ್ರಿಕೆಯ ಸಾತ್ಯ ಲೇಖನ, ಬರವಣಿಗೆಗಳ ಮೂಲಕವೇ ವಿಚಾರಗಳನ್ನು ಚರ್ಚಿಸುತ್ತಿದ್ದರು ಎಂದು ಹೇಳಿದರು.

ನಂತರದ ದಿನಗಳಲ್ಲೂ ಪಡಶೆಟ್ಟಿ ಮತ್ತು ಗಿರಡ್ಡಿಯವರ ಸಂಬಂಧ ಕಳೆದುಕೊಳ್ಳಲಿಲ್ಲ. ಧಾರವಾಡದ ಸಾಹಿತ್ಯ ವಲಯದಲ್ಲಿ ಎಷ್ಟೆ ಭಿನ್ನಾಭಿಪ್ರಾಯಗಳಿದ್ದರು ನಮ್ಮೊಳಗೆ ಪರಸ್ಪರ ಪ್ರೀತಿ, ಸ್ನೇಹ ಮನೋಭಾವನ್ನು ಕಾಯ್ದುಕೊಂಡಿದ್ದೆವು. ಗಿರಡ್ಡಿಯವರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ ಆದರೆ, ಮಾನಸಿಕವಾಗಿ ನಮ್ಮೊಳಗಿದ್ದಾರೆ ಎಂದರು.

ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಮಾತನಾಡಿ, ತಾತ್ವಿಕ ಭಿನ್ನಾಭಿಪ್ರಾಯಗಳು ಸ್ನೇಹವನ್ನು ಒಡೆಯುವುದಿಲ್ಲ ಎನ್ನುವುದಕ್ಕೆ ಗಿರಡ್ಡಿಯರು ಉದಾಹರಣೆ. ಧಾರವಾಡದ ಸಾಹಿತ್ಯ ಸಂಭ್ರಮ ಏರ್ಪಡಿಸಿದ್ದ ಸಂದರ್ಭದಲ್ಲಿ ಪರ್ಯಾಯವಾಗಿ ಸಾಹಿತ್ಯ ಕಾರ್ಯಕ್ರಮ ನಡೆಸಲು ಕೆಲವರು ಮುಂದಾಗಿದ್ದರು. ಆ ಸಮಯದಲ್ಲಿ ಅವರನ್ನು ಕರೆದು ಬುದ್ದಿ ಹೇಳಿದ್ದರು. ಸಾಹಿತ್ಯ ಸಂಭ್ರಮದ ನಂತರ ನಡೆದ ಪರ್ಯಾಯ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿತ್ರ ಸಾಹಿತಿ ಜಯಂತ ಕಾಯ್ಕಿಣಿ, ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ, ಪ್ರೊ.ಮಲ್ಲಿಕಾರ್ಜುನ ಹಿರೇಮಠ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News