ಏಕರೂಪ ಕಾನೂನುಗಳ ತಿದ್ದುಪಡಿ ಅಗತ್ಯ: ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್

Update: 2018-06-03 13:14 GMT

ಬೆಂಗಳೂರು, ಜೂ.3: ಅಲ್ಪಸಂಖ್ಯಾತರ ಸಂಸ್ಥೆ ಮತ್ತು ಟ್ರಸ್ಟ್‌ಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದರೆ ಮುಜರಾಯಿ ಇಲಾಖೆಯ ಏಕರೂಪ ಕಾನೂನನ್ನು ತಿದ್ದುಪಡಿ ಮಾಡಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಟೌನ್‌ಹಾಲ್‌ನಲ್ಲಿ ಜೆ.ಬಿ.ಕೆಂಪಣ್ಣಶೆಟ್ಟರ ಧರ್ಮಸಂಸ್ಥೆಯ ಶತಮಾನೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಸಂಘ-ಸಂಸ್ಥೆ ಹಾಗೂ ಟ್ರಸ್ಟ್‌ಗಳು ಬೇರೆ-ಬೇರೆಯಾಗಿ ಕೆಲಸ ಮಾಡುವುದರಿಂದ ಅವುಗಳ ಜವಾಬ್ದಾರಿಗೆ ಹಿನ್ನಡೆ ಆಗುತ್ತದೆ. ಹೀಗಾಗಿ, ಪ್ರತ್ಯೇಕ ಕಾಯ್ದೆ ರಚಿಸುವುದು ಉತ್ತಮ ಎಂದರು.

ಕರಾವಳಿ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಬ್ಯಾಂಕ್‌ಗಳು ಸರಕಾರದ ನೆರವಿಲ್ಲದೆ ದೇಶದಾಚೆಗೂ ಶಾಖೆಗಳನ್ನು ವಿಸ್ತರಿಸಿಕೊಂಡಿವೆ. ಟ್ರಸ್ಟಿಗಳು ಇದನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವ ಮೂಲಕ ಎಲ್ಲ ಟ್ರಸ್ಟ್, ಸಂಘ-ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಠಗಳಲ್ಲಿ ಸಾಂಪ್ರದಾಯಿಕ ಕೋರ್ಸ್‌ಗಳ ಕಾಲೇಜುಗಳನ್ನು ತೆರೆಯುವ ಬದಲು ಕೌಶಲ್ಯಾಧಾರಿತ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವಂತಹ ಕೋರ್ಸ್‌ಗಳನ್ನು ಆರಂಭಿಸಲು ಮುಂದಾಗಬೇಕು. ಹೀಗಾದಾಗ, ಆರ್ಥಿಕವಾಗಿ ಹಿಂದುಳಿದ ಸಮುದಾಯದ ಪ್ರತಿಭಾನ್ವಿತರನ್ನು ಮುಂಚೂಣಿಗೆ ತರಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಸಮುದಾಯಕ್ಕೆ ಮಠಗಳಿದ್ದರೆ ಉತ್ತಮ ಕೆಲಸಗಳಾಗುತ್ತವೆ ಎಂದು ದಾನಿಗಳಿಂದ ಭಿಕ್ಷೆ ಪಡೆದು ಮಠ ಕಟ್ಟಿಸಿ ಇಬ್ಬರು ಸ್ವಾಮೀಜಿಗಳಿಗೆ ಧೀಕ್ಷೆ ಕೊಡಿಸಿದೆ. ಆದರೆ, ಕ್ಷುಲ್ಲಕ ಕಾರಣದಿಂದ ಮಠ ಬಿಟ್ಟು ಹೋದರು. ಯಾರಾದರೂ ಧಿಕ್ಷೆ ಪಡೆಯಲು ಇಚ್ಛಿಸಿದರೆ ಮಠಾಧೀಶರನ್ನಾಗಿ ಕೂರಿಸಲಾಗುವುದು ಎಂದರು.

ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, ಧಾರ್ಮಿಕ ಸಂಸ್ಥೆಗಳ ಆಡಳಿತ ವರ್ಗದಲ್ಲಿ ನೈತಿಕ ಬಲ ಮತ್ತು ಪ್ರಾಮಾಣಿಕ ಮನಸ್ಸು ಇದ್ದಾಗ ಸಮಾಜವನ್ನು ಉದ್ಧಾರದ ಕಡೆ ತೆಗೆದುಕೊಂಡು ಹೋಗಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಧರ್ಮಸಂಸ್ಥೆಯ ಅಧ್ಯಕ್ಷ ಎಂ.ಎಸ್. ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿ ಬಿ.ಎಂ. ಚಂದ್ರಶೇಖರ್, ಪ್ರೊ.ಐ.ಎಸ್. ಶಿವಕುಮಾರ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News