ಬೆಂಗಳೂರು: ಮಧುಮೇಹ ಜಾಗೃತಿ ಅಭಿಯಾನಕ್ಕೆ ಚಾಲನೆ

Update: 2018-06-03 14:02 GMT

ಬೆಂಗಳೂರು, ಜೂ.2: ಮಧುಮೇಹ ರೋಗ ಕುರಿತು ಅರಿವು ಮೂಡಿಸುವ ‘ನಾವು ಮಧುಮೇಹ ಸೋಲಿಸೋಣ’ಅಭಿಯಾನಕ್ಕೆ ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ರೀತ್ ಅಬ್ರಾಹಂ ಚಾಲನೆ ನೀಡಿದರು.

ರವಿವಾರ ನಗರದಲ್ಲಿ ಆಯೋಜಿಸಿದ್ದ ಅಭಿಯಾನದಲ್ಲಿ ಡಿಎಂಡಿಎಸ್‌ಸಿ ತಂಡವಾದ ಡಾ.ಮೋಹನ್, ಡಾ.ರಂಜಿತ್ ಉನ್ನಿಕಷ್ಣನ್ ಹಾಗೂ ಡಾ. ಆರ್. ಎಂ.ಅಂಜನಾ ಮಧುಮೇಹವನ್ನು ನಿಯಂತ್ರಿಸುವುದಾಗಿ ಪ್ರತಿಜ್ಞೆ ಕೈಗೊಂಡರು.

ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅನಿಲ್ ಕುಂಬ್ಳೆ, ಮಧುಮೇಹಿಗಳು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಖಾಯಿಲೆಯನ್ನು ಹತೋಟಿಯಲ್ಲಿಡಬಹುದಾಗಿದೆ. ಈ ನಿಟ್ಟಿನಲ್ಲಿ, ಡಾ. ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟಿಸ್ ಸೆಂಟರ್ಸ್‌ ಆರಂಭಿಸಿರುವ ಅಭಿಯಾನ ಮಧುಮೇಹಿಗಳಿಗೆ ಉಪಯೋಗಕಾರಿಯಾಗಿದೆ ಎಂದು ತಿಳಿಸಿದರು.

ಡಯಾಬಿಟಿಸ್ ಸ್ಪೆಷಾಲಿಟಿಸ್ ಸೆಂಟರ್ ಅಧ್ಯಕ್ಷ ಹಾಗೂ ಮಧುಮೇಹ ತಜ್ಞರಾದ ಡಾ.ಮೋಹನ್ ಮಾತನಾಡಿ, ಅಂತಾರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ, ಭಾರತ ಎರಡನೇ ಅತ್ಯಂತ ಹೆಚ್ಚಿನ ಸಂಖ್ಯೆಯ ಮಧುಮೇಹಿಗಳನ್ನು ಹೊಂದಿದೆ. ರಾಜ್ಯದ ಜನರಿಗೆ ಮಧುಮೇಹದ ಅಪಾಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಲಾಗಿದೆ ಎಂದರು.

ಸೂಕ್ತ ಚಿಕಿತ್ಸೆ ಹಾಗೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಮಧುಮೇಹಿಗಳು ರೋಗಮುಕ್ತ ಜೀವನವನ್ನು ನಡೆಸಬಹುದಾಗಿದೆ. ಹೀಗಾಗಿ, ಈ ಅಭಿಯಾನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News