‘ಸ್ಥಳೀಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಶೈಕ್ಷಣಿಕ ಗುಣಮಟ್ಟ ಅಗತ್ಯ’
ಬೆಂಗಳೂರು, ಜೂ.3: ಸ್ಥಳೀಯ ಮಟ್ಟದಲ್ಲಿಯೇ ಅಂತಾರಾಷ್ಟ್ರೀಯ ಶೈಕ್ಷಣಿಕ ಗುಣಮಟ್ಟ ಸೃಷ್ಟಿಸಿದಾಗ ಭಾರತೀಯ ವಿದ್ಯಾರ್ಥಿಗಳು ಬೆಳೆಯಲು ಸಾಧ್ಯವಾಗುತ್ತದೆ ಹಾಗೂ ರಾಷ್ಟ್ರ ಸೇವೆ ಮಾಡಲು ಸಹಕಾರಿಯಾಗುತ್ತದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬೆಂಗಳೂರು ಎಜುಕೇಷನಲ್ ಟ್ರಸ್ಟ್ ಹಾಗೂ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸ್‌ನೆಸ್ ಆ್ಯಂಡ್ ರಿಸರ್ಚ್(ಐಎಸ್‌ಬಿಆರ್) ಸಂಸ್ಥೆಯ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿಎದ ಅವರು, ಭಾರತೀಯರು ಹೆಚ್ಚು ಪ್ರಮಾಣದಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಭಾರತದಲ್ಲಿ ಹಲವಾರು ಅವಕಾಶಗಳಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಾಂಗ ಮಾಡಲು ಮುಂದಾಗುತ್ತಿರುವುದು ವಿಪರ್ಯಾಸ. ಆದುದರಿಂದಾಗಿ, ಸ್ಥಳೀಯವಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಉನ್ನತ ಶಿಕ್ಷಣ ಪಡೆಯಲು ಬರುವಂತೆ ಮಾಡಬೇಕು ಎಂದು ಹೇಳಿದರು.
ಜ್ಞಾನ ಮತ್ತು ಕೌಶಲ್ಯಾಧಾರಿತ ಯುವಶಕ್ತಿಯಿಂದ ಯಾವ ಸವಾಲನ್ನಾದರೂ ಎದುರಿಸಬಹುದು ಎಂದ ಅವರು, ತಂತ್ರಜ್ಞಾನದ ಬೆಳವಣಿಗೆಯಿಂದ ಹಲವು ರೀತಿಯ ಅವಕಾಶಗಳು ಸೃಷ್ಟಿಯಾಗುತ್ತಿದೆ. ಸವಾಲುಗಳನ್ನು ಎದುರಿಸುವ ಮೂಲಕ ಹೊಸ ದಾರಿಯನ್ನು ಕಂಡುಕೊಳ್ಳಬಹುದು. ಬಹುತೇಕ ರಾಷ್ಟ್ರಗಳಲ್ಲಿ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡು ಅಭಿವೃದ್ಧಿಯಾಗಿರುವ ಉದಾಹರಣೆ ಇದೆ. ಹೀಗಾಗಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ 175 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ನೀಡಲಾಯಿತು. ಅಲ್ಲದೆ, ಅತ್ಯುತ್ತಮ ವಿದ್ಯಾರ್ಥಿ, ಅತ್ಯುತ್ತಮ ಆಟಗಾರ, ಅತ್ಯುತ್ತಮ ಸೇವೆ, ಶಿಸ್ತು ಮತ್ತು ಸೇವೆಯಲ್ಲಿ ಗುರುತಿಸಿಕೊಂಡಿದ್ದ 49 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಭಾರತೀಯ ಉದ್ಯಮಗಳ ಒಕ್ಕೂಟದ ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್, ಎಲೆಕ್ಟ್ರಾನಿಕ್ ಸಿಟಿ ಪ್ರದೇಶ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಿ.ಬಿ.ರಘುನಂದನ್, ಐಎಸ್‌ಬಿಆರ್ ನಿರ್ದೇಶಕ ಡಾ.ಕೆ.ಎಸ್.ಅನಂದರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.