×
Ad

ಸೈಕ್ಲಿಂಗ್‌ನಿಂದ ಸಂಪೂರ್ಣ ವ್ಯಾಯಾಮ: ಡಾ.ಕೆ.ಎಸ್ ಸತೀಶ್

Update: 2018-06-03 19:52 IST

ಬೆಂಗಳೂರು, ಜೂ.3: ಸೈಕ್ಲಿಂಗ್‌ನಿಂದಾಗಿ ಹೃದಯ, ರಕ್ತನಾಳಗಳು ಮತ್ತು ಶ್ವಾಸಕೋಶಗಳಿಗೆ ಸಂಪೂರ್ಣ ವ್ಯಾಯಾಮ ಲಭಿಸುತ್ತದೆ. ಅಲ್ಲದೆ, ಹೃದಯ ನಾಳಗಳ ರೋಗಗಳ ವಿರುದ್ಧ ರಕ್ಷಣೆ ಲಭಿಸುತ್ತದೆ ಎಂದು ಪೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶ ರೋಗಶಾಸ್ತ್ರ ಸಲಹಾ ತಜ್ಞ ಡಾ.ಕೆ.ಎಸ್.ಸತೀಶ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ತಂಬಾಕು ರಹಿತ ದಿನ ಮತ್ತು ವಿಶ್ವ ಪರಿಸರ ದಿನದ ಅಂಗವಾಗಿ ಆರೋಗ್ಯಕರ ಜೀವನಶೈಲಿ ಆರಿಸಿಕೊಳ್ಳುವುದು ಮತ್ತು ಪರಿಸರ ಸ್ನೇಹಿ ಯಾಗಿರುವುದರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ನಗರದ ಫೋರ್ಟಿಸ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಸೈಕ್ಲೊಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಸೈಕ್ಲಿಂಗ್‌ನಂತಹ ಆರೋಗ್ಯಕರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು ಶ್ಲಾಘನೀಯ. ಪ್ರತಿದಿನದ ಬೆಳಗಿನ ದೈಹಿಕ ದೃಢತೆಯ ಚಟುವಟಿಕೆ ಉಸಿರಾಟದ ತೊಂದರೆಗಳಿಂದ ದೂರವಾಗುತ್ತದೆ ಎಂದು ಹೇಳಿದರು.

ಶ್ವಾಸಕೋಶ ರೋಗಶಾಸ್ತ್ರ ಸಹಾಯಕ ಸಲಹಾತಜ್ಞ ಡಾ. ಸುದರ್ಶನ್ ಮಾತನಾಡಿ, ಕಡಿಮೆ ದೈಹಿಕ ಚಟುವಟಿಕೆಗಳು ಮತ್ತು ತಂಬಾಕಿನ ಚಟ ಹೆಚ್ಚಾಗಿರುವ ಕಾರಣ ಇಂದಿನ ಯುವಪೀಳಿಗೆಗೆ ಶ್ವಾಸಕೋಶದ ತೊಂದರೆಗಳು ಕಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅವರನ್ನು ಸುರಕ್ಷಿತವಾಗಿರಿಸುವುದಲ್ಲದೆ ರೋಗಗಳಿಂದ ದೂರವಿಡುತ್ತದೆ ಎಂದು ತಿಳಿಸಿದರು.

ಗ್ಯಾಟ್ಸ್(2016-17) ಪ್ರಕಾರ ಭಾರತದಲ್ಲಿ ತಂಬಾಕಿನ ಬಳಕೆ ಶೇ.6ರಷ್ಟು ಅಂಶದಿಂದ ಇಳಿಕೆ ಕಂಡಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ನೀತಿ 2017ರಲ್ಲಿ ಪ್ರಸ್ತುತ ತಂಬಾಕು ಬಳಕೆಯನ್ನು 2020ರ ಹೊತ್ತಿಗೆ ಶೇ.15ರಷ್ಟು ಮತ್ತು 2025ರ ಹೊತ್ತಿಗೆ ಶೇ.30ರಷ್ಟು ಇಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಗ್ಯಾಟ್ಸ್-1 ಗಿಂತಲೂ ಪ್ರಸ್ತುತ ತಂಬಾಕು ಬಳಕೆಯಲ್ಲಿ ಶೇ.17ರಷ್ಟು ಕಡಿಮೆಯಾಗಿದೆ ಎಂದು ಗ್ಯಾಟ್ಸ್-2 ತಿಳಿಸಿದೆ ಎಂದು ಅವರು ಹೇಳಿದರು.

ಗೋ ಗ್ರೀನ್ ಗೋ ಸೈಕ್ಲಿಂಗ್‌ನ ಅಧ್ಯಕ್ಷ ರಾವ್ ಮಾತನಾಡಿ, ಸೈಕ್ಲಿಂಗ್‌ನಂತಹ ಆರೋಗ್ಯಕರ ಕಾರ್ಯಕ್ರಮಗಳು ಹೆಚ್ಚಿನ ವೆಚ್ಚ ಇಲ್ಲದೆ ಮತ್ತು ಪರಿಸರಕ್ಕೆ ಯಾವುದೇ ಹಾನಿವುಂಟು ಮಾಡದೆ ದೈಹಿಕ ದೃಢತೆ ಪಡೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News