ಬೆಂಗಳೂರು: ಪತ್ನಿಯ ಪೋನ್ ನಂಬರ್ ವೆಬ್‌ಸೈಟ್‌ಗೆ ಹಾಕಿದ್ದ ಆರೋಪಿಯ ಬಂಧನ

Update: 2018-06-03 14:23 GMT

ಬೆಂಗಳೂರು, ಜೂ.3: ಪತ್ನಿಯ ಮೇಲಿನ ಸಿಟ್ಟಿಗೆ ಆಕೆಯ ಪೋನ್ ನಂಬರ್‌ನ್ನು ಆನ್‌ಲೈನ್ ಡೇಟಿಂಗ್ ವೆಬ್‌ಸೈಟ್‌ಗೆ ಹಾಕಿದ್ದ ವ್ಯಕ್ತಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ತೀರ್ಥಹಳ್ಳಿ ಮೂಲದ ಬಿ.ಎಂ.ವಿನಯ್ ಬಂಧಿತ ವ್ಯಕ್ತಿ. ಆರೋಪಿ ವಿನಯ್ ಮತ್ತು ಆತನ ಪತ್ನಿ ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದ ಪರಸ್ಪರ ಬೇರೆಯಾಗಿದ್ದರು. ಬೇರೆಯಾಗಿದ್ದ ಹೆಂಡತಿಯ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದ ಆರೋಪಿ ವಿನಯ್ ಪತ್ನಿಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಐಡಿ ಕ್ರಿಯೇಟ್ ಮಾಡಿ ಬೇರೊಬ್ಬ ವ್ಯಕ್ತಿಯ ಪೋಟೋ ಜತೆ ಮರ್ಜ್ ಮಾಡಿ ಫೇಸ್‌ಬುಕ್‌ಗೆ ಹಾಕಿದ್ದ. ಇದಾದ ಬಳಿಕ ಅಶ್ಲೀಲ ವೆಬ್‌ಸೈಟ್‌ಗೆ ಪತ್ನಿಯ ಪೋಟೋ ಮತ್ತು ಆಕೆಯ ಪೋನ್ ನಂಬರ್ ಹಾಕಿದ್ದ. ಇದಾದ ನಂತರ ಕೆಲವರು ಮಹಿಳೆಗೆ ಪೋನ್ ಮಾಡಿ ಅಸಭ್ಯವಾಗಿ ಮಾತನಾಡಿದ್ದರು ಎನ್ನಲಾಗಿದ್ದು, ಇದರಿಂದ, ಬೇಸರಗೊಂಡಿದ್ದ ಮಹಿಳೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಗಂಡನೇ ಈ ಕೃತ್ಯ ನಡೆಸಿರಬಹುದೆಂದು ಮಹಿಳೆ ಅನುಮಾನ ವ್ಯಕ್ತಪಡಿಸಿದ್ದರು. ತನಿಖೆ ಮಾಡಿದಾಗ ವಿನಯ್ ಕೃತ್ಯವೆಸಗಿರುವುದು ಖಚಿತವಾಗಿತ್ತು. ಪತ್ನಿಯ ನಡತೆ ಸರಿ ಇಲ್ಲ ಎಂದು ಬಿಂಬಿಸಲು ಈ ರೀತಿ ಮಾಡಿದ್ದೆ ಎಂದು ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ಪರಪ್ಪನ ಅ್ರಹಾರ ಜೈಲಿಗೆ ಕಳುಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News