ಮೈತ್ರಿ ಸರಕಾರಕ್ಕೆ ಸೈದ್ಧಾಂತಿಕ ಸ್ಪಷ್ಟತೆಯಿರಲಿ: ಪ್ರೊ.ಚಂದ್ರಶೇಖರ ಪಾಟೀಲ

Update: 2018-06-03 14:43 GMT

ಬೆಂಗಳೂರು, ಜೂ.3: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ಸೈದ್ಧಾಂತಿಕವಾಗಿ ಭದ್ರವಾಗಿಸಿಕೊಂಡು ನಾಡು, ನುಡಿ ಪರವಾಗಿರುವ ಯೋಜನೆಗಳನ್ನು ರೂಪಿಸಲಿ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಆಶಿಸಿದ್ದಾರೆ.

ರವಿವಾರ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ‘ನಮ್ಮ ಹೊಸ ಸರಕಾರ-ನಮ್ಮ ನಿರೀಕ್ಷೆಗಳು’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈತ್ರಿ ಸರಕಾರದಲ್ಲಿ ಜನಪರ ಯೋಜನೆಗಳು ರೂಪುಗೊಳ್ಳಬೇಕಾದರೆ ಸೈದ್ಧಾಂತಿಕ ಸ್ಪಷ್ಟತೆ ಅಗತ್ಯವೆಂದು ತಿಳಿಸಿದರು.

ಎಚ್‌ಡಿಡಿ ರಾಜಗುರು: ದೇಶದಲ್ಲಿ ತೃತೀಯ ರಂಗವನ್ನು ಒಗ್ಗೂಡಿಸುವಲ್ಲಿ ಹಾಗೂ ರಾಜ್ಯದಲ್ಲಿ ಮೈತ್ರಿ ಸರಕಾರ ರಚಿಸುವಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರಾಜಗುರುವಿನಂತೆ ಕೆಲಸ ಮಾಡಿದ್ದಾರೆ. ಅವರು ಹಿರಿಯ ಸಮಾಜವಾದಿಯಾಗಿ, ಜಾತ್ಯತೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಆಶಯವನ್ನು ಹೊಂದಿದ್ದಾರೆ. ಹೀಗಾಗಿ ಮೈತ್ರಿ ಸರಕಾರ ಎಚ್.ಡಿ.ದೇವೇಗೌಡ ಆಶಯದಂತೆ ಮುನ್ನಡೆಯಲಿ ಎಂದು ಅವರು ಅಭಿಪ್ರಾಯಿಸಿದರು.

ಜೆಡಿಎಸ್ ಪರಿವರ್ತನೆಯಾಗಲಿ: ರಾಜ್ಯದಲ್ಲಿ ಪ್ರಾದೇಶಿಕವಾಗಿ ಜೆಡಿಎಸ್ ಮತ್ತಷ್ಟು ಬಲಿಷ್ಟವಾಗಬೇಕಾದರೆ ಕೆಲವು ಬದಲಾವಣೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಕೇವಲ ಮೈಸೂರು ಪ್ರಾಂತ್ಯದಲ್ಲಷ್ಟೆ ಪ್ರಾಬಲ್ಯ ಹೊಂದಿರುವ ಜೆಡಿಎಸ್ ರಾಜ್ಯದೆಲ್ಲೆಡೆ ಸಮಾನ ರೀತಿಯ ಪ್ರಾಬಲ್ಯ ಹೊಂದಲು ತಳ ಮಟ್ಟದಲ್ಲಿ ಕೆಲಸ ಮಾಡಲು ಯೋಜನೆ ರೂಪಿಸಿಕೊಂಡು ಕಾರ್ಯಪ್ರವೃತ್ತವಾಗಲಿ ಎಂದು ಅವರು ಹೇಳಿದರು.

ಜೆಡಿಎಸ್‌ಯೆಂದರೆ ಒಂದು ಸಮುದಾಯದ ಪಕ್ಷವೆಂದು ಬಿಂಬಿತಗೊಂಡಿದೆ. ಈ ಅಪವಾದದಿಂದ ಹೊರಬಂದು ಎಲ್ಲ ಜಾತಿ ಸಮುದಾಯವನ್ನು ಪ್ರಜ್ಞಾಪೂರ್ವಕವಾಗಿ ಒಳಗೊಳ್ಳಿಸುವಿಕೆಯ ಕಾರ್ಯವಾಗಬೇಕು. ಹಾಗೂ ಕುಟುಂಬ ರಾಜಕಾರಣದಿಂದ ಹೊರಬಂದು ಮುಂದಿನ ದಿನಗಳಲ್ಲಿ ಅಧಿಕಾರ ವಿಕೇಂದ್ರಿಕರಣಕ್ಕೆ ಹೆಚ್ಚು ಆದ್ಯತೆ ಸಿಗುವಂತಾಗಲಿ ಎಂದು ಅವರು ಆಶಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸುಪ್ರೀಂ ಕೋರ್ಟ್, ಸಿಬಿಐ ಸಂಸ್ಥೆಗಳನ್ನು ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಈ ನಡುವಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಹೀಗಾಗಿ ಬಿಜೆಪಿ ವಿರುದ್ಧ ಪರ್ಯಾಯ ಪಕ್ಷಗಳು ಒಟ್ಟಾಗುತ್ತಿರುವುದು ಒಳ್ಳೆಯ ಬೆಳವಣಿಗೆಯೆಂದು ಅಭಿಪ್ರಾಯಿಸಿದರು.

ಈ ವೇಳೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಮಾಯಣ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News