ಮೆಡಿಟರೇನಿಯನ್ ಸಮುದ್ರದಲ್ಲಿ 50ಕ್ಕೂ ಹೆಚ್ಚು ವಲಸಿಗರ ಜಲಸಮಾಧಿ

Update: 2018-06-04 03:46 GMT

ಟ್ಯುನೇಶಿಯಾ, ಜೂ.4: ಮೆಡಿಟರೇನಿಯನ್ ಸಮುದ್ರವನ್ನು ದಾಟುವ ವೇಳೆ ಟ್ಯುನೇಶಿಯಾ ಮತ್ತು ಟರ್ಕಿ ಕಡಲ ಕಿನಾರೆಯಲ್ಲಿ 50ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ.

ದೇಶದ ಎಸ್‌ಫ್ಯಾಕ್ಸ್ ನಗರ ಬಳಿಯ ದಕ್ಷಿಣ ಕಡಲ ತೀರದಲ್ಲಿ 47 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, 68 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ಸಿಬ್ಬಂದಿ, ಸೇನಾ ವಿಮಾನದ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಪ್ರಕಟಿಸಿದೆ.

ಹಡಗು ಒಡೆದ ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಉಳಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆಯ ವಕ್ತಾರ ಫ್ಲಾವಿಯೊ ಡಿ ಗಿಯಾಕೊಮೊ ಹೇಳಿದ್ದಾರೆ.

"ಸೋರಿಕೆ ಕಾರಣದಿಂದ ನಾವೆ ಒಡೆದಾಗ 180 ಮಂದಿ ಅದರಲ್ಲಿದ್ದೆವು" ಎಂದು ಘಟನೆಯಲ್ಲಿ ಉಳಿದ ವ್ಯಕ್ತಿಯೊಬ್ಬರು ಮೊಸಾಯಿಕ್ ಎಫ್‌ಎಂ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದು, ನೌಕೆ ಸುಮಾರು 30 ಅಡಿ ಉದ್ದವಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಟ್ಯುನೇಶಿಯಾ ವಲಸಿಗರು ನಿಯತವಾಗಿ ಮೆಡಿಟರೇನಿಯನ್ ಸಮುದ್ರ ದಾಟಿ ಉತ್ತಮ ಭವಿಷ್ಯದ ಕನಸು ಹೊತ್ತು ಯೂರೋಪ್‌ಗೆ ತೆರಳುತ್ತಾರೆ. ಕಳೆದ ಮಾರ್ಚ್‌ನಲ್ಲಿ ನೌಕಾಪಡೆ 120 ಮಂದಿಯನ್ನು ರಕ್ಷಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ವಲಸಿಗರ ದೋಣಿ ಮತ್ತು ಮಿಲಿಟರಿ ನೌಕೆ ಪರಸ್ಪರ ಢಿಕ್ಕಿ ಹೊಡೆದು 44 ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News