ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿಯಾದ ಕಮಲ್ ಹಾಸನ್

Update: 2018-06-04 15:14 GMT

ಬೆಂಗಳೂರು, ಜೂ. 4: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನಮ್ಮ ರೈತರು, ತಮಿಳುನಾಡಿನ ರೈತರು ಇಬ್ಬರೂ ಬದುಕಬೇಕು. ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.

ಸೋಮವಾರ ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಕುರುವೈ ಬೆಳೆಗೆ ನೀರು ಬಿಡುಗಡೆ ಕುರಿತು ಭೇಟಿಯಾದ ಬಹುಭಾಷಾ ನಟ ಕಮಲಹಾಸನ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಹೋದರ ಭಾವನೆ, ಸೌಹಾರ್ದತೆ ಇರಬೇಕು. ಈ ನಿಟ್ಟಿನಲ್ಲಿಯೇ ನಮ್ಮಿಬ್ಬರ ಚರ್ಚೆ ನಡೆದಿದೆ. ಕುಮಲಹಾಸನ್ ಅವರು ಕುರುವೈ ಬೆಳೆಗೆ ಕಾವೇರಿ ನೀರು ಬಿಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ನಮಗೆ ಎರಡು ರಾಜ್ಯಗಳ ಹಿತ ಮುಖ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಸೌಹಾರ್ದತಯುವಾಗಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯ ತುಂಬಾ ಇದೆ. ಹಾಗಾಗಿ ಅಗತ್ಯ ಬಿದ್ದರೆ ತಮಿಳುನಾಡು ಸರಕಾರದ ಜತೆ ಮಾತುಕತೆಗೂ ಸಿದ್ಧವಿರುವುದಾಗಿ ಕುಮಾರಸ್ವಾಮಿ ಹೇಳಿದರು.

‘ಎಲ್ಲರೂ ಸಮಾನವಾಗಿ ಹೋಗಬೇಕು’

ಕಾವೇರಿ ವಿವಾದ ಇಂದು ನಿನ್ನೆಯದಲ್ಲ, ಎರಡೂ ರಾಜ್ಯಗಳ ರೈತರ ನಡುವೆ ಕಾವೇರಿ ನೀರು ಹಂಚಿಕೆಯಾಗಬೇಕು. ಈ ಸಂಬಂಧ ತಮಿಳುನಾಡು ಸರಕಾರದ ಜತೆಯೂ ಮಾತುಕತೆಗೆ ನಾನು ಸಿದ್ಧ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನವಾಗಿ ಹೋಗಬೇಕು

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News