ಶಿಲ್ಲಾಂಗ್‌ನಲ್ಲಿ ಹಿಂಸಾಚಾರ: ಕರ್ಫ್ಯೂ ವಿಸ್ತರಣೆ

Update: 2018-06-04 15:38 GMT

ಶಿಲ್ಲಾಂಗ್, ಜೂ. 4: ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಹಿಂಸಾಚಾರ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ಮಂಗಳವಾರದ ವರೆಗೆ ವಿಸ್ತರಿಸಿದೆ. ಕಳೆದ ನಾಲ್ಕು ದಿನಗಳಿಂದ ಉದ್ರಿಕ್ತ ಗುಂಪುಗಳು ಹಿಂಸಾಚಾರದಲ್ಲಿ ತೊಡಗಿವೆ ಹಾಗೂ ಭದ್ರತಾ ಪಡೆಯ ಯೋಧರ ಮೇಲೆ ಕಲ್ಲು ತೂರಾಟ ನಡೆಸಿವೆ.

‘‘ಹಿಂಸಾಚಾರ ನಗರದ ಇತರ ಭಾಗಗಳಿಗೆ ಹರಡದಂತೆ ಸೋಮವಾರ ಬೆಳಗ್ಗೆ 5 ಗಂಟೆಯಿಂದ ಮಂಗಳವಾರ ಬೆಳಗ್ಗೆ 5 ಗಂಟೆ ವರಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ’’ ಎಂದು ಪೂರ್ವ ಖಾಸಿ ಹಿಲ್ಸ್‌ನ ಉಪ ಆಯುಕ್ತ ಪೀಟರ್ ಎಸ್. ದ್ಕಾರ್ ಹೇಳಿದ್ದಾರೆ. ‘‘ಈ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಅಕ್ರಮ ಮಾರಾಟ ನಿಷೇಧದೊಂದಿಗೆ ಮೊಬೈಲ್‌ನಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.

 ಶಿಲ್ಲಾಂಗ್‌ನಲ್ಲಿ 6 ಹೆಚ್ಚುವರಿ ಅರೆ ಸೇನಾ ಪಡೆಯ ಕಂಪೆನಿಗಳನ್ನು ನಿಯೋಜಿಸಲು ಕೇಂದ್ರ ಅನುಮೋದನೆ ನೀಡಿದೆ. ಶಾಂತಿಯುತವಾಗಿ ವರ್ತಿಸುವಂತೆ ಮನವಿ ಮಾಡಿರುವ ಮೇಘಾಲಯದ ಗೃಹ ಸಚಿವ ಜೇಮ್ಸ್ ಸಂಗಮ್, ನಗರದಲ್ಲಿನ ಉದ್ವಿಗ್ನ ಪರಿಸ್ಥಿತಿ ಹತೋಟಿಗೆ ತರಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

 ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಸೇನೆಗೆ ಕರೆ ಕಳುಹಿಸಲಾಗಿದೆ. ಖಾಸಿ ಹಿಲ್ಸ್ ವಲಯದಲ್ಲಿ ಸೆಲ್‌ಫೋನ್ ಇಂಟರ್‌ನೆಟ್ ಹಾಗೂ ಪಠ್ಯ ಸಂದೇಶಗಳನ್ನು ರದ್ದುಗೊಳಿಸಲಾಗಿದೆ. ಖಾಸಗಿ ಬ್ರಾಡ್‌ಬ್ಯಾಂಡ್‌ಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಶಿಲ್ಲಾಂಗ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅರೆ ಸೇನಾ ಪಡೆಯ 11 ಕಂಪೆನಿಗಳನ್ನು ಕೇಂದ್ರ ಗೃಹ ಸಚಿವಾಲಯ ಕಳುಹಿಸಿ ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News