ತೆಲಂಗಾಣದ ಅಭಿವೃದ್ಧಿ ಕಾರ್ಯ ದೇಶಕ್ಕೆ ಮಾದರಿ: ತೆಲಂಗಾಣ ಸ್ಥಾಪನಾ ದಿನಾಚರಣೆಯಲ್ಲಿ ಕೆಸಿಆರ್

Update: 2018-06-04 15:42 GMT

ಹೈದರಾಬಾದ್, ಜೂ.4: ತೆಲಂಗಾಣ ರಾಜ್ಯದ ಅಭಿವೃದ್ಧಿ ಕಾರ್ಯ ಮತ್ತು ಜನಕಲ್ಯಾಣ ಯೋಜನೆಗಳು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿವೆ. ತೆಲಂಗಾಣದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಅಧ್ಯಯನ ನಡೆಸಲು ಇತರ ರಾಜ್ಯಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರಂತರ ಭೇಟಿ ನೀಡುತ್ತಿದ್ದಾರೆ ಎಂದು ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ತಿಳಿಸಿದ್ದಾರೆ. ಶನಿವಾರ ತೆಲಂಗಾಣ ರಾಜ್ಯದ ನಾಲ್ಕನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಚಂದ್ರಶೇಖರ ರಾವ್(ಕೆಸಿಆರ್), ಪ್ರತ್ಯೇಕ ರಾಜ್ಯವಾದರೆ ಹೇಗೆ ಅಭಿವೃದ್ಧಿಗೊಳ್ಳಬಹುದು ಎಂಬುದನ್ನು ಕಳೆದ ನಾಲ್ಕು ವರ್ಷದ ಆಡಳಿತದಲ್ಲಿ ತೋರಿಸಿಕೊಟ್ಟಿದ್ದೇವೆ. 

ಸಂಯುಕ್ತ ಆಂಧ್ರಪ್ರದೇಶದ ಯುಗದಲ್ಲಿ ಅಧಿಕಾರ ನಡೆಸಿದ್ದವರು ತೆಲಂಗಾಣ ಪ್ರಾಂತ್ಯವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದರು ಎಂದು ಹೇಳಿದರು. ಕೆಲವು ಕ್ರಾಂತಿಕಾರಿ ನಿರ್ಧಾರ ಹಾಗೂ ಹೊಸಕಲ್ಪನೆಯ ಯೋಜನೆಗಳಿಂದ ಎಲ್ಲಾ ಕ್ಷೇತ್ರಗಳಲ್ಲೂ ಭಾರೀ ಅಭಿವೃದ್ಧಿ ಸಾಧಿಸಲಾಗಿದೆ ಎಂದ ಅವರು, ರಾಜ್ಯ ಅಸ್ತಿತ್ವಕ್ಕೆ ಬಂದು ಕೇವಲ ನಾಲ್ಕು ವರ್ಷವಾದರೂ, ದೇಶದಲ್ಲೇ ಅತೀ ಹೆಚ್ಚಿನ ಅಭಿವೃದ್ಧಿ ದರ ಹೊಂದಿರುವ ಹೆಮ್ಮೆ ತೆಲಂಗಾಣ ರಾಜ್ಯದ್ದಾಗಿದೆ ಎಂದು ತಿಳಿಸಿದರು. ಬಡಜನರ ಹಾಗೂ ತುಳಿಯಲ್ಪಟ್ಟವರ ಕ್ಷೇಮಾಭ್ಯುದಯಕ್ಕಾಗಿ ಪ್ರತೀ ವರ್ಷ 40,000 ಕೋಟಿ ರೂ.ಗೂ ಹೆಚ್ಚಿನ ಮೊತ್ತ ವ್ಯಯಿಸಿ 40 ಜನಕಲ್ಯಾಣ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದೆ ಎಂದ ಅವರು ರಾಜ್ಯ ಸರಕಾರದ ವಿನೂತನ ಕಲ್ಪನೆಗಳಾದ ಮಿಷನ್ ಭಗೀರಥ, ಮಿಷನ್ ಕಾಕತೀಯ ಯೋಜನೆಗಳು, ಕಲೇಶ್ವರಂ ಏತ ನೀರಾವರಿ ಯೋಜನೆ, ಕೃಷಿಗೆ 24 ಗಂಟೆಯೂ ಉಚಿತ ವಿದ್ಯುತ್ ಪೂರೈಕೆ, ಬಡವರಿಗೆ ಉಚಿತ ಮನೆ, ಸಾವಿರಾರು ಸನಿವಾಸ ಶಾಲೆಗಳ ಸ್ಥಾಪನೆ, ಗರ್ಭಿಣಿಯರಿಗೆ ಕೆಸಿಆರ್ ಕಿಟ್ ಯೋಜನೆ, ಬಿಸಿ, ಅಲ್ಪಸಂಖ್ಯಾತರು, ಎಸ್‌ಸಿ, ಎಸ್‌ಟಿ ವರ್ಗದವರಿಗೆ ಕಾಲೇಜು, ಟಿಎಸ್- ಐಪಾಸ್, ಟಿ-ಹಬ್, ಎಸ್‌ಎಚ್‌ಇ ಯೋಜನೆ ಮುಂತಾದವುಗಳನ್ನು ಉಲ್ಲೇಖಿಸಿದರು.

ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಹೋರಾಟದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ಸ್ಮರಿಸಿಕೊಂಡ ಅವರು, ಸಂಪತ್ತನ್ನು ಸೃಷ್ಟಿಸಿ ಅದನ್ನು ಸಮಾಜದ ಎಲ್ಲಾ ವರ್ಗದವರಿಗೂ ಸಮಾನವಾಗಿ ಹಂಚುವ ಕಾರ್ಯವನ್ನು ತಮ್ಮ ಸರಕಾರ ಮಾಡುತ್ತಿದೆ ಎಂದರು. ಇದೇ ವೇಳೆ ತೆಲಂಗಾಣ ಕಾಂಗ್ರೆಸ್ ಪಕ್ಷವೂ ಗಾಂಧಿ ಭವನದಲ್ಲಿ ತೆಲಂಗಾಣ ರಾಜ್ಯ ಸ್ಥಾಪನಾ ದಿನವನ್ನು ಆಚರಿಸಿತು. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎನ್. ಉತ್ತಮ್ ಕುಮಾರ್ ರೆಡ್ಡಿ ರಾಜ್ಯದ ಧ್ವಜ ಅರಳಿಸಿದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪ್ರಯತ್ನದ ಫಲವಾಗಿ ತೆಲಂಗಾಣ ರಾಜ್ಯ ಉದಯಿಸಿದ್ದು ರಾಜ್ಯದ ಜನತೆ ಅವರಿಗೆ ಚಿರಋಣಿಗಳಾಗಿದ್ದಾರೆ ಎಂದರು. ಇದೇ ವೇಳೆ ಅವರು ‘ವಂಚನೆಗೊಳಗಾದ ತೆಲಂಗಾಣ ’ ಎಂಬ ಕರಪತ್ರ ಬಿಡುಗಡೆಗೊಳಿಸಿದರು. ಮುಖ್ಯಮಂತ್ರಿ ಕುಟುಂಬ ರಾಜಕಾರಣ ನಡೆಸುತ್ತಿದ್ದಾರೆ ಎಂದು ಕರಪತ್ರದಲ್ಲಿ ಆರೋಪಿಸಲಾಗಿದೆ. ಅಲ್ಲದೆ ರೈತರ ಹಿತಾಸಕ್ತಿಯನ್ನು ಸರಕಾರ ಕಡೆಗಣಿಸಿದೆ. ಪ್ರಪ್ರಥಮ ತೆಲಂಗಾಣ ಸರಕಾರದ ಮೇಲೆ ಭಾರೀ ನಿರೀಕ್ಷೆ ಇರಿಸಿದ್ದ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ವರ್ಗದ ಜನತೆಗೆ ನಿರಾಸೆಯಾಗಿದೆ ಎಂದು ತಿಳಿಸಲಾಗಿದೆ.

 ಬಿಜೆಪಿ ಕೂಡಾ ತೆಲಂಗಾಣ ಸ್ಥಾಪನಾ ದಿನವನ್ನು ಆಚರಿಸಿದ್ದು ಪಕ್ಷದ ರಾಜ್ಯಾಧ್ಯಕ್ಷ ಡಾ ಕೆ.ಲಕ್ಷ್ಮಣ್ ರಾಜ್ಯದ ಧ್ವಜವನ್ನು ಅರಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News