ಕಾಂಗ್ರೆಸ್ ಪಕ್ಷವನ್ನು ಮಾರಾಟ ಮಾಡುತ್ತಿರುವ ಪರಮೇಶ್ವರ್: ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ

Update: 2018-06-05 14:01 GMT

ಬೆಂಗಳೂರು, ಜೂ.5: ರಾಮನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆ ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ರಾಮನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಮನಗರ ಸೇರಿದಂತೆ ಹಲವು ಕ್ಷೇತ್ರಗಳನ್ನು ಮಾರಾಟ ಮಾಡಲು ಮುಂದಾಗಿರುವ ಪರಮೇಶ್ವರ್, ಕಾಂಗ್ರೆಸ್ ಪಕ್ಷವನ್ನು ಅಧೋಗತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ನಲ್ಲಿದ್ದುಕೊಂಡು ಪಕ್ಷವನ್ನು ಹಾಗೂ ನಮ್ಮನ್ನು ಮಾರಾಟ ಮಾಡಲು ಮುಂದಾಗುತ್ತಿರುವವರನ್ನು ನಮ್ಮ ಅಧ್ಯಕ್ಷರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ಕೊರಟಗೆರೆಯಲ್ಲಿ ಗೆದ್ದು ಉಪಮುಖ್ಯಮಂತ್ರಿಯಾಗಿರುವ ಪರಮೇಶ್ವರ್‌ಗೆ, ಮತ್ತೆ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು, ತಾನು ಮುಖ್ಯಮಂತ್ರಿಯಾಗಬೇಕು ಎಂಬ ಛಲವಿಲ್ಲ. ಉಪ ಮುಖ್ಯಮಂತ್ರಿ ಸ್ಥಾನವೇ ಅವರಿಗೆ ಸಾಕು ಅನಿಸಿದೆ. ಜೀವನದಲ್ಲಿ ಇನ್ನೇನು ಅವರಿಗೆ ಬೇಕಾಗಿಲ್ಲ ಎಂದು ಲಿಂಗಪ್ಪ ದೂರಿದರು.

ಕಡಿಮೆ ಸ್ಥಾನ ಪಡೆದ ಜೆಡಿಎಸ್ ಪಕ್ಷಕ್ಕೆ ಶರಣವಾಗಿರುವ ಕಾಂಗ್ರೆಸ್, ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಹೋಗಿ ಅಧಿಕಾರಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷವು 78 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಟ್ಟು ಭಿಕ್ಷುಕ ಸ್ಥಾನದಲ್ಲಿದೆ. ಖಾತೆಗಳಿಗಾಗಿ ದೇವೇಗೌಡರ ಮುಂದೆ ಕೈ ಕಟ್ಟಿ ನಿಲ್ಲುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾಡಿರುವ ಕೆಲಸ ಕಾರ್ಯಗಳನ್ನು ಮೆಚ್ಚುವ ವರ್ಗ ಇದೆ. ಅದೇ ರೀತಿ ಅಸೂಯೆ ಪಡುವ ವರ್ಗವೂ ಇದೇ. ಇವನನ್ನು ತುಳಿದರೆ ನಾವು ಮೇಲೆ ಬರಬಹುದು ಎಂಬ ಸ್ವಾರ್ಥ ಕೆಲವರಲ್ಲಿದೆ. ಶಿವಕುಮಾರ್‌ಗೆ ಸಚಿವ ಸ್ಥಾನ ತಪ್ಪಿದರೆ ಸಾಕು ಎಂದು ಕೆಲವರು ಕಾಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಡಿ.ಕೆ.ಶಿವಕುಮಾರ್ ಇಲ್ಲದೆ ಹೋಗಿದ್ದರೆ 20 ಶಾಸಕರು ಬಿಜೆಪಿಗೆ ಹೋಗುತ್ತಿದ್ದರು. ಅದನ್ನೆಲ್ಲ ತಪ್ಪಿಸಿ ಪಕ್ಷವನ್ನು ಶಿವಕುಮಾರ್ ಉಳಿಸಿದರು. ಸಿದ್ದರಾಮಯ್ಯನವರೇ ಮುಂದಿನ ಅವಧಿಗೂ ಮುಖ್ಯಮಂತ್ರಿಯಾಗಲಿ, ನನ್ನ ಸಮಯಕ್ಕಾಗಿ ಕಾಯುತ್ತೇನೆ ಎಂದು ಶಿವಕುಮಾರ್ ಹೇಳಿದ್ದರು. ಆದರೂ, ಕಾಂಗ್ರೆಸ್‌ನಲ್ಲಿ ಕೆಲವರು ಅವರಿಗೆ ಅಧಿಕಾರ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಲಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News