ಉಮ್ರಾ ನಿರ್ವಹಿಸಲು ಕತರ್ ನಿವಾಸಿಗಳಿಗೆ ಸ್ವಾಗತ: ಸೌದಿ

Update: 2018-06-05 17:09 GMT

ರಿಯಾದ್, ಜೂ. 5: ಪ್ರಸಕ್ತ ಚಾಲ್ತಿಯಲ್ಲಿರುವ ಕೊಲ್ಲಿ ಬಿಕ್ಕಟ್ಟಿನ ಹೊರತಾಗಿಯೂ, ಉಮ್ರಾ ನಿರ್ವಹಿಸಲು ತಾನು ಕತರ್ ಪ್ರಜೆಗಳನ್ನು ಸ್ವಾಗತಿಸುವುದಾಗಿ ಸೌದಿ ಅರೇಬಿಯದ ಹಜ್ ಮತ್ತು ಉಮ್ರಾ ಸಚಿವಾಲಯ ಮಂಗಳವಾರ ಹೇಳಿದೆ.

ಕಾನೂನುಬದ್ಧವಾಗಿ ನೋಂದಾಯಿಸಿದ ಬಳಿಕ, ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಕತರ್ ಪ್ರಜೆಗಳಿಗೆ ಉಮ್ರಾ ನಿರ್ವಹಿಸುವ ಅವಕಾಶವಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ಸೌದಿ ಪ್ರೆಸ್ ಏಜನ್ಸಿ ತಿಳಿಸಿದೆ.

‘‘ಉಮ್ರಾ ನಿರ್ವಹಿಸಲು ಬಯಸುವ ಕತರ್ ಪ್ರಜೆಗಳು ಸಚಿವಾಲಯದ ವೆಬ್‌ಸೈಟ್‌ನಲ್ಲಿ ತಮ್ಮ ವಿವರಗಳನ್ನು ಸಲ್ಲಿಸಬೇಕು. ಬಳಿಕ ಸೇವಾ ಪ್ಯಾಕೇಜ್‌ಗಳಿಗಾಗಿ ಸೌದಿಯ ಅಧಿಕೃತ ಉಮ್ರಾ ಸೇವೆ ನೀಡುವ ಕಂಪೆನಿಗಳೊಂದಿಗೆ ಇಲೆಕ್ಟ್ರಾನಿಕ್ ಕಾಂಟ್ರಾಕ್ಟಿಂಗ್ ವಿಧಿವಿಧಾನಗಳನ್ನು ಪೂರ್ಣಗೊಳಿಸಬೇಕು’’ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.

ಕತರ್‌ನ ನಾಗರಿಕರು ಮತ್ತು ನಿವಾಸಿಗಳು ರಮಝಾನ್ ವೇಳೆ ಕತರ್ ಏರ್‌ವೇಸ್ ಹೊರತುಪಡಿಸಿ ಇತರ ಯಾವುದೇ ವಿಮಾನಯಾನ ಕಂಪೆನಿಯ ಮೂಲಕ ಜಿದ್ದಾದಲ್ಲಿರುವ ಕಿಂಗ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಬೇಕು ಎಂದು ಸಚಿವಾಲಯ ಹೇಳಿದೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಕಳೆದ ವರ್ಷದ ಜೂನ್ 5ರಂದು ಸೌದಿ ಅರೇಬಿಯ, ಬಹರೈನ್, ಯುಎಇ ಮತ್ತು ಈಜಿಪ್ಟ್‌ಗಳು ಕತರ್‌ನೊಂದಿಗಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಕಡಿದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News