ಯುಎಇ: ಬಿಸಿಲಿನಲ್ಲಿ ಕೆಲಸ ಮಾಡಿಸಿದರೆ 5,000 ದಿರ್ಹಂ ದಂಡ

Update: 2018-06-07 08:25 GMT

ದುಬೈ, ಜೂ. 6: ಕೊಲ್ಲಿ ವಲಯದಲ್ಲಿ ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದ್ದು, ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಯುಎಇ ಸರಕಾರವು ನೂತನ ನಿಯಮವೊಂದನ್ನು ರೂಪಿಸಿದೆ.

‘ಬೇಸಿಗೆ ಕಾಲದ ವಿಶ್ರಾಂತಿ ನಿಯಮ’ವು ಜೂನ್ 15ರಿಂದ ಜಾರಿಗೆ ಬರಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ವಿಶ್ರಾಂತಿಗೆ ಅವಕಾಶವೊದಗಿಸದ ಕಂಪೆನಿಗಳಿಗೆ ಪ್ರತಿ ಕಾರ್ಮಿಕರಿಗೆ 5000 ದಿರ್ಹಂ (ಸುಮಾರು 90,000 ರೂಪಾಯಿ)ನಂತೆ ದಂಡ ವಿಧಿಸುವ ಅವಕಾಶವು ಈ ಕಾನೂನಿನಲ್ಲಿದೆ ಎಂದು ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯವು ತಿಳಿಸಿದೆ.

ವರ್ಷದಲ್ಲಿ ಮೂರು ತಿಂಗಳು ಚಾಲ್ತಿಯಲ್ಲಿರುವ ಈ ನಿಯಮದ ಅನುಸಾರ, ಅಪರಾಹ್ನ 12:30ರಿಂದ 3 ಗಂಟೆಯವರೆಗೆ ಕಾರ್ಮಿಕರನ್ನು ಬಿಸಿಲಿರುವ ಪ್ರದೇಶಗಳಲ್ಲಿ ಕೆಲಸ ಮಾಡಿಸುವಂತಿಲ್ಲ. ಮಾಡಿಸಿದರೆ ಮೇಲಿನಂತೆ ದಂಡ ವಿಧಿಸಲಾಗುವುದು.

ಕಾರ್ಮಿಕರ ದೊಡ್ಡ ಗುಂಪು ಕಾಮಗಾರಿಗಳಲ್ಲಿ ತೊಡಗಿರುವುದು ಕಂಡುಬಂದಲ್ಲಿ, ಕಂಪೆನಿಯ ಮೇಲೆ 50,000 ದಿರ್ಹಂ (ಸುಮಾರು 9 ಲಕ್ಷ ರೂ.)ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಅದು ಹೇಳಿದೆ.

ಇದರ ಬಳಿಕವೂ ಕಂಪೆನಿಗಳು ತಮ್ಮ ಚಾಳಿ ಮುಂದುವರಿಸಿದಲ್ಲಿ ಅಂತಹ ಕಂಪೆನಿಗಳ ಮಾನ್ಯತೆಯನ್ನೇ ರದ್ದು ಪಡಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.

ಎಂಟು ಗಂಟೆಗಳವರೆಗೆ ಇರುವ ಕೆಲಸವನ್ನು ಪೂರ್ವಾಹ್ನ ಹಾಗೂ ಸಂಜೆ ಎಂಬಂತೆ ಎರಡು ಹಂತಗಳಾಗಿ ವಿಭಜಿಸಲಾಗಿದ್ದು, ಈ ವೇಳೆಯಲ್ಲಿ ಮಾತ್ರವೇ ಕಾರ್ಮಿಕರನ್ನು ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾಸರ್ ಬಿನ್ ತಾನಿ ಅಲ್ ಹಮೇಲಿ ಹೇಳಿದ್ದಾರೆ.

ಸಾಮಾನ್ಯ ಕೆಲಸಗಳ ಬಳಿಕ ಹೆಚ್ಚುವರಿಯಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ಭತ್ತೆಗಳನ್ನು ನೀಡಬೇಕು ಎಂದು ಅವರು ಹೇಳಿದ್ದಾರೆ.

 ಕಾರ್ಮಿಕರ ಕೆಲಸದ ಸಮಯವನ್ನು ಮಾಲೀಕರು ಸ್ಪಷ್ಟವಾಗಿ ತಿಳಿಸಬೇಕು ಹಾಗೂ ಕಾರ್ಮಿಕರಿಗೆ ವಿಶ್ರಾಂತಿಗಾಗಿ ಉದ್ಯೋಗದಾತರು ಸ್ಪಷ್ಟವಾದ ಸಮಯವನ್ನು ನಿಗದಿಸಿಪಡಿಸಿಕೊಡಬೇಕು. ಕಾರ್ಮಿಕರಿಗೆ ವಿಶ್ರಾಂತಿ ವೇಳೆಯಲ್ಲಿ ಬಿಸಿಲಿನ ಬೇಗೆ ತಟ್ಟದಿರಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಬೇಕು ಹಾಗೂ ಅವರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ನಿರಂತರ ಕೆಲಸ ಮಾಡಬೇಕಾದರೆ...

ವಿಶ್ರಾಂತಿಯಿಲ್ಲದೆ ನಿರಂತರವಾಗಿ ಕೆಲಸ ನಿರ್ವಹಿಸಲೇಬೇಕಾದ ಅನಿವಾರ್ಯತೆಯಿರುವ ತುರ್ತು ಸಂದರ್ಭಗಳಲ್ಲಿ ಆರೋಗ್ಯ ಇಲಾಖೆಯ ಮಾರ್ಗದರ್ಶನಗಳನ್ನು ಚಾಚೂ ತಪ್ಪದೆ ಪಾಲಿಸಬೇಕೆಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೇಳಿದೆ.

ತಣ್ಣೀರು, ಉಪ್ಪು, ನಿಂಬೆ ಹಣ್ಣು ಮುಂತಾದ ವಸ್ತುಗಳು, ಪ್ರಥಮ ಚಿಕಿತ್ಸೆ ಪರಿಕರಗಳು ಹಾಗೂ ಹವಾನಿಯಂತ್ರಕ ಕೊಠಡಿಗಳನ್ನು ಉದ್ಯೋಗದಾತರು ಒದಗಿಸಿಕೊಡುವುದು ಕಡ್ಡಾಯ ಎಂದು ಸಚಿವಾಲಯ ತಿಳಿಸಿದೆ.

Writer - ವರದಿ: ಸಿರಾಜ್ ಅರಿಯಡ್ಕ

contributor

Editor - ವರದಿ: ಸಿರಾಜ್ ಅರಿಯಡ್ಕ

contributor

Similar News