ಜ್ಞಾನ ಆಯೋಗದ ಅಧ್ಯಕ್ಷರಾಗಿ ಕಸ್ತೂರಿ ರಂಗನ್ ಮುಂದುವರಿಕೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-06-07 14:29 GMT

ಬೆಂಗಳೂರು, ಜೂ. 7: ಕರ್ನಾಟಕ ಜ್ಞಾನ ಆಯೋಗದ ಸಮಗ್ರ ವರದಿ ನೀಡುವವರೆಗೆ ಡಾ.ಕೆ.ಕಸ್ತೂರಿ ರಂಗನ್ ಅವರನ್ನೇ ಜ್ಞಾನ ಆಯೋಗದ ಅಧ್ಯಕ್ಷರನ್ನಾಗಿ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜ್ಞಾನ ಆಯೋಗದ ಅಧ್ಯಕ್ಷ ಕಸ್ತೂರಿ ರಂಗನ್ ಜತೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಕಸ್ತೂರಿ ರಂಗನ್ ಅವರು ಆಯೋಗದ ಅಧ್ಯಕ್ಷರನ್ನು ಬದಲಿಸುವಂತೆ ಕೋರಿದ್ದಾರೆ. ಆದರೆ ಸಮಗ್ರ ವರದಿ ನೀಡುವವರೆಗೂ ಅವರೇ ಮುಂದುವರೆಯುವಂತೆ ಸೂಚಿಸಿದ್ದೇನೆ ಎಂದರು.

ಕರ್ನಾಟಕ ಜ್ಞಾನ ಆಯೋಗದ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಉನ್ನತ ಶಿಕ್ಷಣ, ಆರೋಗ್ಯ, ಕೃಷಿ-ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ, ನಿರುದ್ಯೋಗ ಸಮಸ್ಯೆ ನಿವಾರಣೆ, ಕೆರೆ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿದ್ದು, ಅದೀಗ ಅಂತಿಮ ಹಂತಕ್ಕೆ ಬಂದಿದೆ. ಈ ಸಂಬಂಧ ಕೇಂದ್ರ ಸರಕಾರ ಹೊಸ ನೀತಿಗಳನ್ನು ರೂಪಿಸುತ್ತಿದ್ದು, ಇದರಿಂದ ರಾಜ್ಯ ಸರಕಾರ ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ಪಡೆಯಲು ಸಾಧ್ಯವಾಗಲಿದೆ ಎಂದ ಅವರು, ಮುಂದಿನ ಬಜೆಟ್‌ನಲ್ಲಿ ಜ್ಞಾನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಮಾತನಾಡಿದ ಜ್ಞಾನ ಆಯೋಗದ ಅಧ್ಯಕ್ಷ ಡಾ.ಕಸ್ತೂರಿ ರಂಗನ್, ಆಯೋಗ 16 ಶಿಫಾರಸುಗಳನ್ನು ಸರಕಾರಕ್ಕೆ ಸಲ್ಲಿಸಿದ್ದು, ಆ ಪೈಕಿ 12 ಶಿಫಾರಸ್ಸುಗಳನ್ನು ರಾಜ್ಯ ಸರಕಾರ ಒಪ್ಪಿದೆ. ಮೈಸೂರಿನಲ್ಲಿ ಕಾವೇರಿ ಕಲಾ ಗ್ಯಾಲರಿ ನಿರ್ಮಾಣ, ಮಡಿವಾಳ ಕೆರೆಯಲ್ಲಿ ಜೀವ ವೈವಿಧ್ಯ ಉದ್ಯಾನವನ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಎನ್.ಮಹೇಶ್, ಬಂಡೆಪ್ಪ ಕಾಶೆಂಪೂರ್, ಜ್ಞಾನ ಆಯೋಗದ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಸದಸ್ಯ ಮುಕುಂದರಾವ್, ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಲಕ್ಷ್ಮಿನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News