ನನ್ನ ಪ್ರವಾಸದ ವೆಚ್ಚವನ್ನು ಭರಿಸಲು ಸಿದ್ಧ: ಯಡಿಯೂರಪ್ಪ

Update: 2018-06-07 14:36 GMT

ಬೆಂಗಳೂರು, ಜೂ. 7: ‘ನನ್ನ ಪ್ರವಾಸದ ವೆಚ್ಚವನ್ನು ಭರಿಸಲು ನಾನು ಸಿದ್ಧನಿದ್ದೇನೆ. ಆದರೆ, ತಾವು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಜನರನ್ನು ದಾರಿ ತಪ್ಪಿಸುವಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವುದು ಸರಿಯಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಅನಿವಾರ್ಯ, ತುರ್ತು ಪರಿಸ್ಥಿತಿಯಲ್ಲಿ ಸರಕಾರದ ಮುಖ್ಯಸ್ಥನಾಗಿ, ಅಧಿಕೃತವಾಗಿ ಸರಕಾರ ನೀಡಿದ ವ್ಯವಸ್ಥೆಯನ್ನು ನಾನು ಬಳಸಿಕೊಂಡಿದ್ದೇನೆ. ಆದರೆ, ತಾವು ಈ ಪ್ರಸಂಗವನ್ನು ಅತ್ಯಂತ ಹಗುರವಾಗಿ ಮಾತನಾಡಿರುವುದು, ನನಗೆ ಅತ್ಯಂತ ಖೇದವನ್ನು ತಂದಿದೆ. ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾಗಿ ಮತ್ತು ಆ ಸಮಯದಲ್ಲಿ ಉಸ್ತುವಾರಿ ಮುಖ್ಯಮಂತ್ರಿಯಾಗಿ ಅದು ನನ್ನ ಕರ್ತವ್ಯ ಎಂದು ತಿಳಿದು ಅಂದು ಬಾಗಲಕೋಟೆ ಜಿಲ್ಲೆಯ ಇಳಕಲ್ಲಿಗೆ ಹೋಗಿದ್ದೆ. ಸಮಯ, ಸಂದರ್ಭಗಳ ಸೂಕ್ಷ್ಮ ತಿಳಿದುಕೊಳ್ಳದೆ, ಒಬ್ಬ ರೈತರ ಮತ್ತು ಧರ್ಮಗುರುಗಳ ಅಂತಿಮ ನಮನ ಸಲ್ಲಿಸಿದ್ದ ವಿಷಯವನ್ನು ತಾನು ದುಂದುವೆಚ್ಚ ಎನ್ನುವುದಕ್ಕೆ ಬಳಸಿಕೊಂಡಿರುವುದು ಸರಿಯೇ? ಎಂದು ಬಿಎಸ್‌ವೈ ಪ್ರಶ್ನಿಸಿದ್ದಾರೆ.

ತಾವು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ಎರಡು ವಾರಗಳಿಂದ ಸಚಿವ ಸಂಪುಟ ರಚನೆಗಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನು ಜನತೆ ಗಮನಿಸುತ್ತಿದ್ದಾರೆ. ರಾಜಕೀಯ ಮೇಲಾಟ ಮತ್ತು ಅಧಿಕಾರಕ್ಕಾಗಿ ಹಗ್ಗಜಗ್ಗಾಟದಲ್ಲೇ ಕಾಲಕಳೆಯುತ್ತಿದ್ದು ಆಡಳಿತ ಯಂತ್ರವೇ ನಿಂತುಹೋಗಿದೆ. ಆದರೆ, ಇದಕ್ಕಿಂತಲೂ ತಮ್ಮ ವೈಯಕ್ತಿಕ ಹೆಚ್ಚುಗಾರಿಕೆಯನ್ನು ತೋರ್ಪಡಿಸಲು, ಸ್ವಾಮೀಜಿ ಅಂತ್ಯ ಸಂಸ್ಕಾರದ ಭೇಟಿಯನ್ನು ದುಂದುವೆಚ್ಚ ಎಂದಿರುವ ನಿಮ್ಮ ಕುಚೋದ್ಯದ ದುರಹಂಕಾರದ ಹೇಳಿಕೆಗಳನ್ನು ನಿಲ್ಲಿಸಿ. ಇಂತಹ ಕೀಳುಮಟ್ಟದ ಹೇಳಿಕೆಗಳಿಂದ ಆರ್ಥಿಕ ಸ್ಥಿತಿ ಸುಧಾರಿಸುವುದಿಲ್ಲ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ರೈತರ ಸಾಲಮನ್ನಾ ಮಾಡಿ ನಿಮ್ಮ ರಾಜಕೀಯ ನೈಪುಣ್ಯತೆ ಪ್ರದರ್ಶಿಸಿ ಎಂದು ಯಡಿಯೂರಪ್ಪ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News