ರೋಶನ್‌ ಬೇಗ್‌ಗೆ ಸಚಿವ ಸ್ಥಾನ ನೀಡಲು ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

Update: 2018-06-07 14:39 GMT

ಬೆಂಗಳೂರು, ಜೂ.7: ರಾಜ್ಯದ ಅಭಿವೃದ್ಧಿಗಾಗಿ ಶೋಷಿತ ವರ್ಗಗಳ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿರುವ ಹಿರಿಯ ಶಾಸಕ ಆರ್.ರೋಶನ್‌ಬೇಗ್‌ರನ್ನು ಸಚಿವ ಸ್ಥಾನ ನೀಡುವ ಮೂಲಕ ಮುಸ್ಲಿಮ್ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಂಜುಮನ್ ಖುದ್ದಾಂ ಉಲ್ ಮುಸ್ಲಿಮೀನ್‌ನ ಮುಹಮ್ಮದ್ ನಸೀಮ್ ಸೇಠ್, ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿರುವ ಸಮ್ಮಿಶ್ರ ಸರಕಾರದ ಸಚಿವ ಸಂಪುಟದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ದಲಿತರ ನಂತರ ಅತಿದೊಡ್ಡ ಸಮುದಾಯವಾಗಿರುವ ಮುಸ್ಲಿಮ್ ಸಮಾಜದವರಿಗೆ ರಾಜಕೀಯವಾಗಿ ಅಧಿಕಾರ ನೀಡಲು ಅನ್ಯಾಯದ ಮೇಲೆ ಅನ್ಯಾಯ ಆಗುತ್ತಾ ಬಂದಿದೆ. ರಾಜಕೀಯ ಪಕ್ಷಗಳು ನಮ್ಮನ್ನು ಓಟು ಬ್ಯಾಂಕ್ ಆಗಿ ಬಳಸಿಕೊಂಡಿವೆಯೇ ವಿನಃ ನಮ್ಮ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಸದೃಢವಾಗಲು ಪ್ರೋತ್ಸಾಹ ಮಾತ್ರ ನೀಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯ ವಕ್ಫ್ ಮಂಡಳಿಯ ಮಾಜಿ ಸದಸ್ಯ ಎಸ್.ಎಸ್.ಜಾಗೀರ್‌ದಾರ್ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಸ್ಲಿಮ್ ಸಮುದಾಯದ ಕೇವಲ ಇಬ್ಬರಿಗೆ ಮಾತ್ರ ಪ್ರಾತಿನಿಧ್ಯ ನೀಡಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಸರಕಾರದಲ್ಲಿ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದರು.

ಮುಸ್ಲಿಮ್ ಸಮಾಜದಲ್ಲಿ ಪ್ರಭಾವಿ ನಾಯಕರಾಗಿರುವ ಏಳನೆ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರೋಶನ್‌ ಬೇಗ್‌ರನ್ನು ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಒತ್ತಾಯಿಸುತ್ತಿವೆ. ಆದರೆ, ಅವರಿಗೆ ಕನಿಷ್ಠ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದು ತೀವ್ರ ಖಂಡನೀಯ ಎಂದು ಅವರು ಹೇಳಿದರು.

ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿಗೆ ಮೂರು, ಪರಿಶಿಷ್ಟ ಪಂಗಡಕ್ಕೆ ಒಂದು, ಮುಸ್ಲಿಮ್ ಸಮುದಾಯಕ್ಕೆ ಎರಡು, ಉಪ್ಪಾರ, ಈಡಿಗ ಸಮುದಾಯಕ್ಕೆ ತಲಾ ಒಂದು, ಒಕ್ಕಲಿಗ ಸಮುದಾಯಕ್ಕೆ ಒಂಭತ್ತು, ಲಿಂಗಾಯತರಿಗೆ ನಾಲ್ಕು, ಕುರುಬ ಸಮಾಜದ ಇಬ್ಬರಿಗೆ ಪ್ರಾತಿನಿಧ್ಯ ನೀಡಲಾಗಿದೆ. ಮುಸ್ಲಿಮ್ ಸಮಾಜಕ್ಕೆ ತೀರಾ ಅನ್ಯಾಯ ಮಾಡಿದ್ದು, ಕೂಡಲೆ ಕಾಂಗ್ರೆಸ್ ಪಕ್ಷದಿಂದ ಇನ್ನೂ ಹಲವರನ್ನು ಮುಸ್ಲಿಮ್ ಸಮಾಜದವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಖಿಲ ಕರ್ನಾಟಕ ಮುಹಮ್ಮದೀಯರ ಕನ್ನಡಿಗರ ವೇದಿಕೆಯ ಅಧ್ಯಕ್ಷ ಸಮೀವುಲ್ಲಾ ಖಾನ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಜಯಪುರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಐ.ಎಂ.ಇಂಡೀಕರ್, ಕಲಬುರ್ಗಿಯ ಸೈಯ್ಯದ್ ಮಝರ್ ಹುಸೇನ್, ಧಾರವಾಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸೈಯ್ಯದ್ ಮಹಬೂಬ್, ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಸಂಚಾಲಕ ಸೂಫಿ ವಲಿಬಾ, ಸೈಯ್ಯದ್ ಝೈನಬ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಅತೀಖ್ ಅಹಮದ್, ಮುಸ್ಲಿಮ್ ಸೆಕ್ಯೂಲರ್ ಸೇನೆಯ ಸಾಗರ್ ಸಮೀವುಲ್ಲಾ , ರಾಜ್ಯ ಹಜ್ ಸಮಿತಿ ಸದಸ್ಯ ಸೈಯ್ಯದ್ ಸನಾವುಲ್ಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News