ಕುರುಬ ಸಮುದಾಯದ ಮೂವರಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಬೆಂಗಳೂರು, ಜೂ.7: ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಕುರುಬ ಸಮುದಾಯದ ಒಬ್ಬ ಶಾಸಕರಿಗೂ ಸಚಿವ ಸ್ಥಾನ ನೀಡದ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ಹಾಲುಮತ ಮಹಾಸಭಾ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ನಮ್ಮ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಹಾಲು ಮತ ಮಹಾಸಭಾ ಮುಖಂಡ ಶಿವಣ್ಣ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುರುಬ ಸಮುದಾಯದ ನಾಯಕರನ್ನು ತುಳಿಯುತ್ತಿದೆ. ಕಾಂಗ್ರೆಸ್‌ನಿಂದ ಒಟ್ಟು 8 ಜನ ಶಾಸಕರು ಆಯ್ಕೆಯಾಗಿ ಬಂದರೂ ಒಬ್ಬರಿಗೂ ಸಚಿವ ಸಂಪುಟದಲ್ಲಿ ಅವಕಾಶ ನೀಡದೆ, ಕಾಂಗ್ರೆಸ್ ಉಂಡ ಮನೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕುರುಬ ಸಮುದಾಯವಿದ್ದು, ವಿಧಾನಸಭಾ ಚುನಾವಣೆಯಲ್ಲಿ ಬಹುತೇಕ ಕುರುಬರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ಹೀಗಾಗಿ, ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಹಾಗೂ ಜನಸಂಖ್ಯೆ ಆದಾರದ ಮೇಲೆ ಕನಿಷ್ಠ ಪಕ್ಷ ಮೂರು ಸಚಿವ ಸ್ಥಾನಗಳನ್ನು ನೀಡಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘ ಅಧ್ಯಕ್ಷ ಡಾ. ರಾಜೇಂದ್ರ ಯಮನಪ್ಪ ಸಣ್ಣಕ್ಕಿ ಮಾತನಾಡಿ, ಸಮುದಾಯದ ಶೇ. 90 ರಷ್ಟು ಮತಗಳನ್ನು ಕಾಂಗ್ರೆಸ್‌ಗೆ ನೀಡಿ, 79 ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಸಹಕರಿಸಿದ್ದಾರೆ. ಪಕ್ಷದ ಮುಖಂಡರು ತಪ್ಪು ಸರಿಪಡಿಸಿಕೊಳ್ಳದಿದ್ದರೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವ ಪಕ್ಷವನ್ನು ಬೆಂಬಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಶುಕ್ರವಾರ (ಜೂನ್ 8) ಕೆಪಿಸಿಸಿ ಕಚೇರಿ ಮುಂಭಾಗ ಸಮುದಾಯದ ವತಿಯಿಂದ ಸಾಂಕೇತಿಕ ಧರಣಿ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.