ಜೂ.11ರಂದು ಜಯನಗರ ಚುನಾವಣೆ: ಮತದಾನಕ್ಕೆ ಸೂಕ್ತ ವ್ಯವಸ್ಥೆ

Update: 2018-06-07 16:06 GMT

ಬೆಂಗಳೂರು, ಜೂ.7: ಬಿಜೆಪಿ ಅಭ್ಯರ್ಥಿ ವಿಜಯ್‌ಕುಮಾರ್ ನಿಧನ ಹಿನ್ನೆಲೆ ಮುಂದೂಡಲಾಗಿದ್ದ, ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರಕ್ರಿಯೆ ಜೂ.11ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ನಡೆಯಲಿದ್ದು, ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರರಾವ್ ಇಂದಿಲ್ಲಿ ಹೇಳಿದರು.

ಗುರುವಾರ ಜಯನಗರದ ಖಾಸಗಿ ಹೊಟೇಲ್‌ನಲ್ಲಿ ನಗರ ಪೊಲೀಸ್ ಆಯುಕ್ತ ಸೇರಿದಂತೆ ಇನ್ನಿತರೆ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ 3,12,252 ಮತದಾರರಿದ್ದಾರೆ. 1,02,668ಪುರುಷರು, 1,00,500 ಮಹಿಳಾ ಮತದಾರರು ಹಾಗೂ 16 ಜನ ಲೈಂಗಿಕ ಅಲ್ಪಸಂಖಾತ ಮತದಾರರಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್, ಬಿಜೆಪಿ ಸೇರಿದಂತೆ ಒಟ್ಟು 19 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದ ಅವರು, ಕ್ಷೇತ್ರ ವ್ಯಾಪ್ತಿಯ 7 ವಾರ್ಡ್‌ಗಳಲ್ಲಿ 216 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಇವುಗಳ ಪೈಕಿ 65 ಕ್ಲಸ್ಟರ್ ಮತದಾನ ಕೇಂದ್ರಗಳಿವೆ. ಎಲ್ಲ ಮತಗಟ್ಟೆಗಳಿಗೆ ಅಗತ್ಯವಿರುವ ಇವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳನ್ನು ಸಿದ್ಧಪಡಿಸಲಾಗಿದೆ. 5 ಕಡೆ ಸಖಿ ಪಿಂಕ್ ಮತಗಟ್ಟೆಗಳನ್ನು ಗುರುತಿಸಿ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಸೂಕ್ಷ: ಒಟ್ಟು 50 ಸೂಕ್ಷ್ಮ ಮತಗಟ್ಟೆಗಳಲ್ಲಿದ್ದು, ವೆಬ್ ಕಾಸ್ಟಿಂಗ್ ಸೌಲಭ್ಯ ಒದಗಿಸಲಾಗಿದೆ. ಅದೇ ರೀತಿ, 60 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. 15 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಿಗೆ ಸೌಲಭ್ಯ ಒದಗಿಸಲು 29 ಸೆಕ್ಟರ್ ಅಧಿಕಾರಿಗಳ ನೇಮಿಸಿದ್ದು, 10 ಚೆಕ್ ಪೋಸ್ಟ್, 23 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಕಾರ್ಯ ನಿರ್ವಹಿಸಲಿವೆ. 4 ವಿಡಿಯೋ ಕಣ್ಗಾವಲು ತಂಡಗಳು ದಿನದ 24ಗಂಟೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಮಾತನಾಡಿ, 6 ಪೊಲೀಸ್ ಠಾಣೆಗಳು, ಇಬ್ಬರು ಉಪ ಪೊಲೀಸ್ ಆಯುಕ್ತರು, ದಕ್ಷಿಣ, ಆಗ್ನೇಯ ವಿಭಾಗ ಉಪ ಪೊಲೀಸ್ ಆಯುಕ್ತರು ಸೇರಿದಂತೆ 332 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಇಲ್ಲಿವರೆಗೆ ನೀತಿಸಂಹಿತೆ ಪ್ರಕರಣದಡಿ 30.82 ಲಕ್ಷ ರೂ. ಜಪ್ತಿ ಮಾಡಿ, 14 ಎಫ್‌ಐಆರ್ ದಾಖಲಾಗಿದೆ. ಜೂ7ರಂದು 1ಎನ್.ಸಿ.ಆರ್ ದಾಖಲಿಸಿ 4.80ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಒಟ್ಟು 1400 ಮತಗಟ್ಟೆಗಳ ಸಿಬ್ಬಂದಿ, 31 ಬಿಎಂಟಿಸಿ, 2 ಕಾರು, 7 ಮಿನಿ ಬಸ್, 10 ಟೆಂಪೋ ಟ್ರಾವೆಲರ್ ನಿಯೋಜಿಸಲಾಗಿದೆ ಎಂದರು.

ಒಟ್ಟು ಮತದಾರರು-3,12,252
ಮಹಿಳೆಯರು-1,00,500
ಪುರುಷರು-1,02,668
ಲೈಂಗಿಕ ಅಲ್ಪಸಂಖ್ಯಾತರು-16
ಒಟ್ಟು ಮತಗಟ್ಟೆ-216
ಸೂಕ್ಷ್ಮ ಮತಗಟ್ಟೆ-50

ಜೂ.11ರಂದು ನಡೆಯುವ ಜಯನಗರ ವಿಧಾನಸಭಾ ಚುನಾವಣೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದ್ದು, 216 ಮತಗಟ್ಟೆಗಳಿಗೂ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಸಿದ್ಧಪಡಿಸಿದ್ದು, ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ.
-ಮಹೇಶ್ವರರಾವ್, ಜಿಲ್ಲಾ ಚುನಾವಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News