ರೂಪ ಶಶಿಧರ್‌ಗೆ ಸಚಿವ ಸ್ಥಾನಕ್ಕೆ ಆಗ್ರಹ

Update: 2018-06-07 16:07 GMT

ಬೆಂಗಳೂರು, ಜೂ.7: ಕೋಲಾರ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಮಾದಿಗ ಸಮುದಾಯದ ಶಾಸಕಿ ರೂಪ ಶಶಿಧರ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಮಾದಿಗ ದಂಡೋರ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ದಂಡೋರದ ಅಧ್ಯಕ್ಷ ಎಂ.ಸಿ.ಶ್ರೀನಿವಾಸ್, ರಾಜ್ಯದಲ್ಲಿ ಮಾದಿಗ ಸಮುದಾಯದ ಮಹಿಳಾ ಶಾಸಕಿಯಾಗಿರುವ ರೂಪ ಶಶಿಧರ್‌ರನ್ನು ಜಾತಿ ಕಾರಣ ಸಚಿವ ಸಂಪುಟದಿಂದ ದೂರವಿಡುವ ಪ್ರಯತ್ನ ಮಾಡಲಾಗಿದೆ. ಮಾದಿಗರನ್ನು ಮತ ಬ್ಯಾಂಕ್ ಬಳಕೆ ಮಾಡಿಕೊಳ್ಳುತ್ತಿದ್ದು, ರಾಜಕೀಯ ಸ್ಥಾನಮಾನ ನೀಡುವ ವೇಳೆ ದೂರವಿಡಲಾಗುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ದಲಿತರನ್ನು ರಾಜಕೀಯದಿಂದ ದೂರವಿಡುವ ವ್ಯವಸ್ಥಿತ ಪಿತೂರಿ ಮಾಡಲಾಗುತ್ತಿದೆ. ವಿಧಾನಪರಿಷತ್ ಸದಸ್ಯೆ ಜಯಮಾಲಾಗೆ ಸಚಿವ ಸ್ಥಾನ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಪರಿಷತ್ ಸದಸ್ಯರಾದ ಆರ್.ಬಿ.ತಿಮ್ಮಾಪೂರ ಮತ್ತು ಆರ್.ಧರ್ಮಸೇನರನ್ನು ಕಡೆಗಣಿಸಲಾಗಿದೆ. ಅವಕಾಶವಿದ್ದರೂ, ದಲಿತರಿಗೆ ಅವಕಾಶ ನೀಡದೆ, ಮೇಲ್ಜಾತಿಯವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರು ಸಚಿವ ಸಂಪುಟ ರಚನೆ ಸಂದರ್ಭದಲ್ಲಾಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News