ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡಲು ಆಗ್ರಹ

Update: 2018-06-07 16:09 GMT

ಬೆಂಗಳೂರು, ಜೂ. 7: ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡದೆ ವಂಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ರೆಡ್ಡಿ ಜನ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಸಂಘದ ಅಧ್ಯಕ್ಷ ವಿಜಯರಾಘವರೆಡ್ಡಿ, ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 45 ವರ್ಷಗಳಿಂದ ಕೆಲಸ ಮಾಡುತ್ತಿರುವ ಹಾಗೂ 7 ಬಾರಿ ಶಾಸಕರಾಗಿ ಆಯ್ಕೆಯಾಗಿ, ಹಲವು ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ವ್ಯಕ್ತಿಯನ್ನು ಕಡೆಗಣಿಸಿದ್ದಾರೆ. ಆದರೆ, ಅಪರಾಧ ಹಿನ್ನೆಲೆಯುಳ್ಳವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ದೂರಿದರು.

ಬೆಂಗಳೂರು ಮಹಾನಗರ ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ ಬಿಜೆಪಿ ಭದ್ರಕೋಟೆಯಂತಹ ಸ್ಥಳಗಳಲ್ಲಿಯೂ ಪಕ್ಷವನ್ನು ಸಂಘಟನೆ ಮಾಡಿ ಸುಮಾರು 13 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ರಾಮಲಿಂಗಾರೆಡ್ಡಿಯ ಕೊಡುಗೆ ಅಪಾರವಾದುದಾಗಿದೆ. ಅಲ್ಲದೆ, ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಸಿಗದಿದ್ದ ಸಂದರ್ಭದಲ್ಲಿ ಮೈತ್ರಿ ಆಡಳಿತ ರಚನೆಗೆ ರಾಮಲಿಂಗಾರೆಡ್ಡಿ ಪಾತ್ರ ವಿಶೇಷವಾದುದಾಗಿದೆ. ಅಂತಹ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಿರುವುದು ಸರಿಯಾದುದಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕ, ಪಕ್ಷಾತೀತವಾಗಿ ಜನಸೇವೆ ಮಾಡಿದ ನಾಯಕ ರಾಮಲಿಂಗಾರೆಡ್ಡಿಯಾಗಿದ್ದು, ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಇಲ್ಲದಿದ್ದರೆ, ನಾಳೆ(ಜೂ.8) ನಮ್ಮ ಸಂಘದ ಸಭೆ ನಡೆಯಲಿದೆ. ಅಲ್ಲಿ ನಮ್ಮ ಮುಂದಿನ ನಡೆ ಏನು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ರೆಡ್ಡಿ ಸಮುದಾಯದ ವೇಮಾನಂದ ಸ್ವಾಮೀಜಿ ಮಾತನಾಡಿ, ದಕ್ಷ, ಭ್ರಷ್ಟ ರಹಿತ ಹಾಗೂ ಅರ್ಹತೆಯುಳ್ಳ ವ್ಯಕ್ತಿಗೆ ಸಚಿವ ಸ್ಥಾನದ ವಂಚನೆಯಾಗಿದೆ. ಇಂದಿನ ಸಮ್ಮಿಶ್ರ ಸರಕಾರ ಅಪಾಯದ ಅಂಚಿನಲ್ಲಿ ನಿಂತಿದೆ. ಹೀಗಿರುವಾಗ ಪ್ರಾಮಾಣಿಕರನ್ನು ಕಡೆಗಣಿಸುವುದು ಸರಿಯಲ್ಲ ಎಂದು ತಿಳಿಸಿದರು.

ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಆದರೂ, ಉತ್ತರ ಕರ್ನಾಟಕದ ಭಾಗದ ಪ್ರಭಾವಿ ನಾಯಕ ಎಂ.ಬಿ.ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ತಪ್ಪಿಸಿರುವುದು ತೀವ್ರ ಖಂಡನೀಯ. 30-40 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಹಾಗೂ ಎಲ್ಲ ಜಾತಿ, ಧರ್ಮದ ಪರವಾಗಿ ಕೆಲಸ ಮಾಡಿದವರನ್ನು ದೂರವಿಡುವ ಪ್ರಯತ್ನ ಮಾಡುತ್ತಿರುವುದು ಸ್ವಾಗತಾರ್ಹವಾದುದಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News