ಟ್ವೆಂಟಿ-20: ಬಾಂಗ್ಲಾದೇಶ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಅಫ್ಘಾನಿಸ್ತಾನ

Update: 2018-06-08 06:52 GMT

ಡೆಹ್ರಾಡೂನ್, ಜೂ.8: ಮೂರನೇ ಹಾಗೂ ಕೊನೆಯ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 1 ರನ್‌ನಿಂದ ಮಣಿಸಿದ ಅಫ್ಘಾನಿಸ್ತಾನ ತಂಡ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 6 ವಿಕೆಟ್‌ಗಳ ನಷ್ಟಕ್ಕೆ 145 ರನ್ ಗಳಿಸಿತು. ಗೆಲ್ಲಲು 146 ರನ್ ಗುರಿ ಪಡೆದ ಬಾಂಗ್ಲಾದೇಶ ಪರ ಹಿರಿಯ ಆಟಗಾರರಾದ ಮುಶ್ಫೀಕುರ್ರಹೀಂ(46, 37 ಎಸೆತ) ಹಾಗೂ ಮಹ್ಮೂದುಲ್ಲಾ(ಔಟಾಗದೆ 45,38 ಎಸೆತ)ಐದನೇ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

19ನೇ ಓವರ್‌ನಲ್ಲಿ ಕರೀಮ್ ಜನತ್ 21 ರನ್ ಸೋರಿಕೆ ಮಾಡಿದ ಕಾರಣ ಬಾಂಗ್ಲಾದೇಶ ಪಂದ್ಯ ಗೆಲ್ಲುವ ಫೇವರಿಟ್ ಎನಿಸಿಕೊಂಡಿತ್ತು. ಆದರೆ, ಕೊನೆಯ ಓವರ್ ಬೌಲಿಂಗ್ ಮಾಡಿದ ರಶೀದ್ ಖಾನ್ ಕೇವಲ 9 ರನ್ ನೀಡಿ ಅಫ್ಘಾನಿಸ್ತಾನವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಬಾಂಗ್ಲಾದೇಶದ ಗೆಲುವಿಗೆ ಕೊನೆಯ 2 ಓವರ್‌ಗಳಲ್ಲಿ 30 ರನ್ ಅಗತ್ಯವಿತ್ತು. ಮುಶ್ಫೀಕುರ್ರಹೀಂ ಅವರು ಜನತ್ ಬೌಲಿಂಗ್‌ನಲ್ಲಿ ಸತತ 5 ಬೌಂಡರಿಗಳನ್ನು ಬಾರಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು. ಬಾಂಗ್ಲಾಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 9 ರನ್ ಅವಶ್ಯಕತೆಯಿತ್ತು. ಆಗ ಅಫ್ಘಾನ್ ನಾಯಕ ಅಸ್ಘರ್ ಸ್ಟಾನಿಕ್‌ಝೈ ತಂಡದ ಟ್ರಂಪ್‌ಕಾರ್ಡ್ ರಶೀದ್‌ಗೆ ಚೆಂಡನ್ನು ನೀಡಿದರು. ನಾಯಕನ ನಂಬಿಕೆಯನ್ನು ಉಳಿಸಿಕೊಂಡ ರಶೀದ್ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ಮುಶ್ಫೀಕುರ್ರಹೀಂ ವಿಕೆಟ್ ಉರುಳಿಸಿದರು. ಅಂತಿಮ ಓವರ್‌ನಲ್ಲಿ 9 ರನ್ ನೀಡಿ ತಂಡಕ್ಕೆ 1 ರನ್‌ನಿಂದ ರೋಚಕ ಗೆಲುವು ತಂದರು.

ರಶೀದ್ 24 ರನ್‌ಗೆ 1 ವಿಕೆಟ್ ಪಡೆದಿದ್ದರೂ ಪಂದ್ಯದ ಚಿತ್ರಣ ಬದಲಿಸಲು ಯಶಸ್ವಿಯಾಗಿದ್ದಾರೆ.

ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡಕ್ಕೆ ಮುಹಮ್ಮದ್ ಶಹಝಾದ್(26) ಹಾಗೂ ಉಸ್ಮಾನ್ ಘನಿ(19) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 46 ಎಸೆತಗಳಲ್ಲಿ 55 ರನ್ ಕಲೆ ಹಾಕಿದರು. ಸಮೀವುಲ್ಲಾ ಶೆನ್ವಾರಿ 28 ಎಸೆತಗಳಲ್ಲಿ ಔಟಾಗದೆ 33 ರನ್ ಗಳಿಸಿದರು. ನಜೀಬುಲ್ಲಾ ಝದ್ರಾನ್ ಇನಿಂಗ್ಸ್ ಅಂತ್ಯದಲ್ಲಿ 15 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಬಾಂಗ್ಲಾದೇಶ ಪರ ಇಸ್ಲಾಂ(2-18) ಹಾಗೂ ಜಾವೇದ್(2-27) ತಲಾ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಅಫ್ಘಾನಿಸ್ತಾನ ಮೊದಲೆರಡು ಪಂದ್ಯಗಳನ್ನು ಕ್ರಮವಾಗಿ 45 ರನ್ ಹಾಗೂ ಆರು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News