ಕಾಂಗ್ರೆಸ್ ನಾಯಕರೇ ಪಕ್ಷದ ಸಮಸ್ಯೆ ಬಗೆಹರಿಸಬೇಕು: ಎಚ್.ಡಿ.ಕುಮಾರಸ್ವಾಮಿ

Update: 2018-06-08 13:02 GMT

ಬೆಂಗಳೂರು, ಜೂ.8: ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಸಮ್ಮಿಶ್ರ ಸರಕಾರ ಆಗಿರುವುದರಿಂದ ಎಂ.ಬಿ.ಪಾಟೀಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಸದಾಶಿವನಗರದಲ್ಲಿರುವ ಎಂ.ಬಿ.ಪಾಟೀಲ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಬಿ.ಪಾಟೀಲ್ ತಮ್ಮ ಮನಸ್ಸಿನ ಭಾವನೆಗಳನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ ಎಂದರು.

ಪರಿಸ್ಥಿತಿಯನ್ನು ನನ್ನ ಕೈಲಾದ ಮಟ್ಟಿಗೆ ಅವರಿಗೆ ವಿವರಿಸುವ ಪ್ರಯತ್ನವನ್ನು ಮಾಡಿದ್ದೇನೆ. ಈ ಬೆಳವಣಿಗೆಗಳು ಅವರ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ನಾನು ಹೆಚ್ಚಿಗೆ ಏನು ಹೇಳಲು ಸಾಧ್ಯವಿಲ್ಲ. ಸರಕಾರದ ಮಿತ್ರ ಪಕ್ಷ ಸಂಕಷ್ಟದಲ್ಲಿರುವಾಗ ಸಂಧಾನಕ್ಕೆ ಬರುವುದು ಸರಿ ಅನ್ನಿಸಿತು. ಅದರಿಂದ ಇಲ್ಲಿಗೆ ಬಂದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಪಕ್ಷಕ್ಕಾಗಿ ಎಂ.ಬಿ.ಪಾಟೀಲ್ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಸಚಿವ ಸ್ಥಾನ ಸಿಗದೆ ಇರುವುದರಿಂದ ಬೇಸರ ಆಗುವುದು ಸಹಜ. ಕಾಂಗ್ರೆಸ್ ನಾಯಕರೇ ಅವರ ಅಸಮಾಧಾನವನ್ನು ಬಗೆಹರಿಸುವ ಕೆಲಸ ಮಾಡಬೇಕು. ಸಮ್ಮಿಶ್ರ ಸರಕಾರ ಸುಭದ್ರವಾಗಿರಬೇಕೆಂಬ ಉದ್ದೇಶದಿಂದ ನಾನು ಇಲ್ಲಿಗೆ ಬಂದು ಅವರ ಸಮಸ್ಯೆಯನ್ನು ಕೇಳಿದ್ದೇನೆ ಎಂದು ಅವರು ತಿಳಿಸಿದರು.

ಎಂ.ಬಿ.ಪಾಟೀಲ್ ವೈಯಕ್ತಿಕವಾಗಿ ಒಬ್ಬರೇ ಯಾವುದನ್ನು ನಿರ್ಧರಿಸುವ ಪರಿಸ್ಥಿತಿಯಲ್ಲಿ ಇಲ್ಲ. ಅವರು ಏಕಾಂಗಿಯಲ್ಲ, ಕಾಂಗ್ರೆಸ್ ಪಕ್ಷದಲ್ಲಿರುವ ಕೆಲ ಅತೃಪ್ತ ಶಾಸಕರು ಅವರೊಂದಿಗಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಂಧಾನ ವಿಫಲ: ಕುಮಾರಸ್ವಾಮಿ ಆಗಮನದ ಮುನ್ನ ಎಂ.ಬಿ.ಪಾಟೀಲ್‌ರನ್ನು ಭೇಟಿ ಮಾಡಿದ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ನಡೆಸಿದ ಸಂಧಾನ ಮಾತುಕತೆ ವಿಫಲವಾಗಿತ್ತು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಗಾರಿದ ಎಂ.ಬಿ.ಪಾಟೀಲ್, ಚುನಾವಣೆ ಖರ್ಚಿಗಾಗಿ ನಾನು ಬೇಕು. ಅಧಿಕಾರ ಹಂಚಿಕೆ ವೇಳೆ ನನ್ನ ಅಗತ್ಯವಿಲ್ಲವೇ ? ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

ನಾನು ಮಾಡಿರುವ ತಪ್ಪೇನು, ನನ್ನನ್ನು ಸಂಪುಟದಿಂದ ಹೊರಗಿಟ್ಟಿದ್ದು ಏಕೇ ? ಕಾಂಗ್ರೆಸ್ ಪಕ್ಷಕ್ಕೆ ನನ್ನಿಂದ ಆಗಿರುವ ಅನ್ಯಾಯವೇನು ? ಎಂದು ಎಂ.ಬಿ.ಪಾಟೀಲ್ ಖಾರವಾಗಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ, ನಾಯಕರು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದಿರುಗಿದ್ದಾರೆ.
ಎಂ.ಬಿ.ಪಾಟೀಲ್ ಜೊತೆ ಮಾತುಕತೆ ನಡೆಸಿ ಹಿಂದಿರುಗುತ್ತಿದ್ದ ಪರಮೇಶ್ವರ್‌ಗೆ ಎಂ.ಬಿ.ಪಾಟೀಲ್ ಬೆಂಬಲಿಗರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಅಲ್ಲದೆ, ಪರಮೇಶ್ವರ್ ಕಾರಿಗೆ ಅಡ್ಡಲಾಗಿ ಮಲಗಿ, ತಮ್ಮ ಆಕ್ರೋಶ ಹೊರ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News