×
Ad

ಸಚಿವ ಸಂಪುಟ ದಲಿತರಿಗೆ ಅನ್ಯಾಯ ಆರೋಪ: ಜೂ.19ಕ್ಕೆ ಪ್ರತಿಭಟನೆ

Update: 2018-06-08 19:39 IST

ಬೆಂಗಳೂರು, ಜೂ.8: ಜೆಡಿಎಸ್-ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ದಲಿತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಜೂ.19ರಂದು ಮಾನವ ಬಂಧುತ್ವ ವೇದಿಕೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆ ಸಂಚಾಲಕ ಮಾವಳ್ಳಿ ಶಂಕರ್, ಕಾಂಗ್ರೆಸ್ ಈ ಬಾರಿ ವೈಚಾರಿಕ ಬದ್ಧತೆಯ ರಾಜಕಾರಣಿ ಸತೀಶ್ ಜಾರಕಿಹೊಳಿ ಅವರಿಗೆ ಅನ್ಯಾಯ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಸಾಮಾಜಿಕ ನ್ಯಾಯದ ತತ್ವಗಳಿಗೆ ತಿಲಾಂಜಲಿ ಹಾಕಿದೆ ಎಂದರು.

ಮೈತ್ರಿ ಸರಕಾರವು ಪ್ರಾಮಾಣಿಕ, ಬದ್ಧತೆ, ಜನಪರ ಶಾಸಕರನ್ನು ನಿರ್ಲಕ್ಷಿಸಿದೆ. ಈ ಮೂಲಕ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಗೆ ಎಡೆ ಮಾಡಿಕೊಟ್ಟಿದೆ ಎಂದ ಅವರು, ಕಾಂಗ್ರೆಸ್ ಕೋಟಾದಲ್ಲಿ ಸಚಿವ ಸಂಪುಟಕ್ಕೆ ಸೇರ್ಪಡೆ ಆಗಿರುವ ನಾಯಕರ ಸಾಮಾಜಿಕ ಅರ್ಹತೆಗಳು, ಕೊಡುಗೆ ಏನು ಎಂಬುವುದನ್ನು ಬಹಿರಂಗಪಡಿಸಬೇಕು. ಅಲ್ಲದೆ, ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಪರಿಗಣಿಸದೆ ಇರುವ ಕಾರಣ ನೀಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಪಕ್ಷ ಕೂಡ ಒಕ್ಕಲಿಗ ಜನಾಂಗಕ್ಕೆ ಮಣೆ ಹಾಕಿದಂತಿದೆ. ಹಾಸನ ಜಿಲ್ಲೆಯ ಮೀಸಲು ಕ್ಷೇತ್ರದಿಂದ ಆರು ಬಾರಿ ಗೆದ್ದಿರುವ ಹೆಚ್.ಕೆ.ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ರಾಜ್ಯದ ಭೂಗಳ್ಳರಿಗೆ ಸಿಂಹಸ್ವಪ್ನರಾಗಿದ್ದ ಎ.ಟಿ.ರಾಮಸ್ವಾಮಿ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಆದರೆ, ಗೃಹ ಮಂಡಳಿಯ ಅಧ್ಯಕ್ಷರಾಗಿದ್ದ ವೇಳೆ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸಿದ್ದ ಜಿ.ಟಿ.ದೇವೇಗೌಡ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ದೂರಿದರು.

ಮೈತ್ರಿ ಸರಕಾರದ ಧೋರಣೆ ಖಂಡಿಸಿ ಮತ್ತು ದಲಿತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಜೂ. 19ರಂದು ಬೆಂಗಳೂರಿನಲ್ಲಿ ಸಿಟಿ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ವಿಧಾನಸೌಧ ಚಲೋ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಸಿದ್ದಲಿಂಗಯ್ಯ, ವಕೀಲ ಅನಂತ್‌ನಾಯ್ಕಿ, ವೇದಿಕೆಯ ಸದಸ್ಯರಾದ ಜಯಕುಮಾರ್, ದೇವರಾಜ್, ಶಿವರಾಜ್, ರಘು ಯಾದವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News