ಅಬಕಾರಿ ಆಯುಕ್ತ ಮನೀಶ್ ಮೌದ್ಗಿಲ್ ವರ್ತನೆಗೆ ಸಿಎಂ ಕುಮಾರಸ್ವಾಮಿ ಆಕ್ರೋಶ

Update: 2018-06-08 14:11 GMT

ಬೆಂಗಳೂರು, ಜೂ.8: ಚುನಾವಣೆ ನಿಮಿತ್ತ ವರ್ಗಾವಣೆಗೊಂಡಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳನ್ನು ಮೂಲ ಸ್ಥಾನಕ್ಕೆ ವರ್ಗಾವಣೆಗೊಳಿಸುವಂತೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಮನ್ನಣೆ ನೀಡದ ಅಬಕಾರಿ ಇಲಾಖೆ ಆಯುಕ್ತ ಮನೀಶ್‌ ಮೌದ್ಗಿಲ್‌ಗೆ ಅಮಾನತ್ತು ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಅಬಕಾರಿ ಇಲಾಖೆಯಲ್ಲಿನ ಮಹಿಳಾ ಸಿಬ್ಬಂದಿಗಳು ಮುಖ್ಯಮಂತ್ರಿಯನ್ನು ಶುಕ್ರವಾರ ವಿಧಾನಸೌಧದಲ್ಲಿ ಭೇಟಿ ಮಾಡಿ ತಮ್ಮನ್ನು ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡುವಂತೆ ಸರಕಾರ ಹೊರಡಿಸಿದ್ದ ಆದೇಶಕ್ಕೆ ಮನೀಶ್ ಮೌದ್ಗಿಲ್ ಮನ್ನಣೆ ನೀಡದಿರುವ ಬಗ್ಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕಾರ್ಯದರ್ಶಿಯನ್ನು ಕರೆದ ಮುಖ್ಯಮಂತ್ರಿ, ಸರಕಾರಕ್ಕಿಂತ ಐಎಎಸ್ ಅಧಿಕಾರಿ ದೊಡ್ಡವರೇ? ನಾವು ಹೊರಡಿಸಿರುವ ಆದೇಶವನ್ನು ಅನುಷ್ಠಾನಕ್ಕೆ ತರುವುದು ಅಧಿಕಾರಿಯ ಕರ್ತವ್ಯ. ಸೋಮವಾರದೊಳಗೆ ಆದೇಶ ಜಾರಿಯಾಗದಿದ್ದರೆ ಅಬಕಾರಿ ಆಯುಕ್ತರನ್ನು ಅಮಾನತ್ತು ಮಾಡಿ ಎಂದು ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗವು ಹಲವರನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಿತ್ತು. ಇದೀಗ ಸರಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಮತ್ತೆ ತಮ್ಮನ್ನು ಮೂಲ ಸ್ಥಾನಕ್ಕೆ ವರ್ಗಾವಣೆ ಮಾಡುವಂತೆ ಮಹಿಳಾ ಸಿಬ್ಬಂದಿಗಳು ಮನವಿ ಸಲ್ಲಿಸಿದ್ದರು ಎಂದರು.

ಅದರಂತೆ, ಸರಕಾರದ ವತಿಯಿಂದ ಮಹಿಳಾ ಸಿಬ್ಬಂದಿಗಳನ್ನು ಮೂಲ ಸ್ಥಾನಗಳಿಗೆ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಲಾಗಿತ್ತು. ಆದರೆ, ಆ ಆದೇಶವನ್ನು ಜಾರಿಗೊಳಿಸಲ್ಲ ಎಂಬ ಮಾತನ್ನು ಅಧಿಕಾರಿ ಹೇಳಿರುವುದಾಗಿ ನನಗೆ ಎರಡು ಸಲ ದೂರು ಬಂದಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಅಬಕಾರಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಪ್ರಾಮಾಣಿಕತೆ ಜೊತೆಗೆ, ಮಾನವೀಯತೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸರಕಾರ ನೀಡಿದ ಆದೇಶವನ್ನು ಜಾರಿಗೊಳಿಸುವುದಷ್ಟೇ ಅಧಿಕಾರಿಗಳ ಕೆಲಸ. ಸರಕಾರಕ್ಕಿಂತ ಅಧಿಕಾರಿಗಳು ದೊಡ್ಡವರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡಿರಲಿ. ಸೋಮವಾರದೊಳಗೆ ವರ್ಗಾವಣೆ ಪ್ರಕ್ರಿಯೆ ನಡೆಯದಿದ್ದರೆ, ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದರು.

ಗೆಜೆಟ್ ಪ್ರಕಟವಾಗಬೇಕು
ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಅಂತಿಮವಾಗಿದ್ದು, ಈಗಾಗಲೆ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಗೆಜೆಟ್ ನೋಟಿಫಿಕೇಷನ್ ಆಗಬೇಕಿದೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News