×
Ad

ಇತಿಹಾಸ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವುಳ್ಳವರ ಸಂಖ್ಯೆ ಕಡಿಮೆ: ಅಂಕಣಕಾರ ಪೃಥ್ವಿದತ್ತ ಚಂದ್ರಶೋಭಿ

Update: 2018-06-08 19:45 IST

ಬೆಂಗಳೂರು, ಜೂ.8: ಇತಿಹಾಸದ ಕುರಿತು ಸಮರ್ಥವಾದ ಬರವಣಿಗೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಸಾಮರ್ಥ್ಯವುಳ್ಳವರ ಸಂಖ್ಯೆ ಅತ್ಯಂತ ಕಡಿಮೆಯಿದೆ ಎಂದು ಅಂಕಣಕಾರ ಪೃಥ್ವಿದತ್ತ ಚಂದ್ರಶೋಭಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆ ಸಂಪುಟ ವಿಷಯ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ಮತ್ತು ಆರ್ಥಿಕ ಇತಿಹಾಸವನ್ನು ಸರಳೀಕರಿಸುವುದು ಕಷ್ಟದ ಕೆಲಸ. ಅಲ್ಲದೆ, ಯಾವುದೇ ಯೋಜನೆಯಿಲ್ಲದೆ ಸಾಮಾಜಿಕ ಇತಿಹಾಸ ರಚನೆ ಮಾಡುವುದು ಕಷ್ಟ. ಆದುದರಿಂದಾಗಿ, ಕ್ಲಿಷ್ಟಕರವಾದ ಇತಿಹಾಸವನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಹೇಳಿದರು.

ಸಮುದಾಯದ ಇತಿಹಾಸವನ್ನು ಸ್ವಚಿಂತನೆ ಮೂಲಕ ತುಂಬುವುದು ಕಷ್ಟದ ಕೆಲಸ. ಅದೇ ರೀತಿ ಪ್ರಭುತ್ವ ರೂಪಗೊಂಡ ಬಗೆ ಹೇಗೆ ಎಂಬುವ ಇತಿಹಾಸವನ್ನು ಮರು ರಚನೆ ಮಾಡುವುದು ಅತ್ಯಂತ ಕ್ಲಿಷ್ಟ. ಇದುವರೆಗೂ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಭೂ ಮಾಲಕತ್ವ ಸೇರಿದಂತೆ ವಿವಿಧ ಇತಿಹಾಸವನ್ನು ನೋಡಿದ್ದೇವೆ. ಆದರೆ, ಅದನ್ನು ಮತ್ತಷ್ಟು ವಿಶ್ಲೇಷಣೆ ಮಾಡಿ, ವಿಸ್ತರಿಸಲು ಕಷ್ಟಕರವಾಗುತ್ತಿದೆ. ಇದುವರೆಗೂ ಸಂಪೂರ್ಣ ಇತಿಹಾಸವನ್ನು ಅಧ್ಯಯನ ಮಾಡಲು ಸಾಧ್ಯವಾಗಿಲ್ಲ ಎಂದರು.

ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ವಿವಿಧ ಆಯಾಮಗಳನ್ನು ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು ಹಾಗೂ ಕುವೆಂಪು ಭಾಷಾ ಭಾರತಿ ಜಂಟಿಯಾಗಿ ಹೊರ ತಂದಿರುವ ಕರ್ನಾಟಕ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆ ಸಂಪುಟದಲ್ಲಿ ಅಡಕವಾಗಿದೆ. ಕರ್ನಾಟಕದ ಸಾಮಾಜಿಕ ಇತಿಹಾಸವನ್ನು ಐತಿಹಾಸಿಕವಾಗಿ ಹಾಗೂ ಅರ್ಥಪೂರ್ಣವಾಗಿ ಕ್ರೋಡೀಕರಿಸಲಾಗಿದೆ ಎಂದು ತಿಳಿಸಿದರು.

ಪರಿಷತ್ತು ಹೊರ ತಂದಿರುವ ಸಂಪುಟ ಓದುಗರನ್ನು ಸೆಳೆಯುವಂತಿದೆ. ಆ ಮೂಲಕ ಕರ್ನಾಟಕದ ಇತಿಹಾಸವನ್ನು ಹೆಚ್ಚಿನ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಸಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೆ.ಪ್ರದೀಪ್ ಕುಮಾರ್, ಲೇಖಕರಾದ ಗೋವರ್ಧನ, ರಶ್ಮಿ, ವಡ್ಡಗೆರೆ ನಾಗರಾಜಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News