ಪಾರ್ಕಿಂಗ್ ಹೆಸರಿನಲ್ಲಿ ದರೋಡೆ: ಆರೋಪ

Update: 2018-06-08 14:18 GMT

ಬೆಂಗಳೂರು, ಜೂ.8: ವಾಹನ ನಿಲುಗಡೆ (ಪಾರ್ಕಿಂಗ್) ಹೆಸರಿನಲ್ಲಿ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಹೈಕೋರ್ಟ್‌ನ ವಕೀಲ ಅಮೃತೇಶ್ ಇಂದಿಲ್ಲಿ ಆರೋಪಿಸಿದರು.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಈ ಹಿಂದೆ ನಿಗದಿಯಾಗಿದ್ದ ಪಾರ್ಕಿಂಗ್ ವ್ಯವಸ್ಥೆಯನ್ನು ಶೇ.100ಕ್ಕೆ ಹೆಚ್ಚಿಸಿ, ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಟೆಂಡರ್ ದಿನಾಂಕವನ್ನು ಮುಂದೂಡುತ್ತಾ ಬಿಎಂಟಿಸಿ ಆಡಳಿತ ಮಂಡಳಿ, ಟೆಂಡರುದಾರರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಎಂದರು.

ನಗರದ ಹಲವು ಕಡೆಗಳ ಪಾರ್ಕಿಂಗ್ ವ್ಯವಸ್ಥೆಯ ಅಂಕಿ-ಅಂಶವನ್ನು ಬಿಡುಗಡೆ ಮಾಡಿದ ಅವರು, ಕೆಲವು ಸರಕಾರಿ ಕಟ್ಟಡ, ಆಸ್ಪತ್ರೆ, ಮಹಾನಗರ ಪಾಲಿಕೆ, ಮುಜರಾಯಿ ದೇವಸ್ಥಾನ ಸೇರಿದಂತೆ ಇನ್ನಿತರೆಡೆ ಪಾರ್ಕಿಂಗ್ ವ್ಯವಸ್ಥೆಯು ಅತಿ ಕಡಿಮೆ ದರದಲ್ಲಿದೆ. ಆದರೆ, ಶಾಂತಿನಗರ, ಜಯನಗರ ಸೇರಿದಂತೆ ಇನ್ನಿತರ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರತಿ ಬೈಕ್‌ಗೆ 10 ರೂ.ನಿಂದ 100 ರೂಪಾಯಿ ವರೆಗೆ ವಂತಿಗೆ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ, ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಇದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ನ್ಯಾಯಲಯದ ಮುಂದೆ ತೆರಳುವುದಾಗಿ ಅಮೃತೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News