ತೋಟಗಾರಿಕೆ ತರಬೇತಿ ಪಡೆದ ಅಭ್ಯರ್ಥಿಗಳ ಖಾಯಂಗೆ ಒತ್ತಾಯ
ಬೆಂಗಳೂರು, ಜೂ. 8: ತೋಟಗಾರಿಕೆ ಇಲಾಖೆಯಲ್ಲಿ ತರಬೇತಿ ಪಡೆದ ಗ್ರಾಮೀಣ ಭಾಗದ ಅಭ್ಯರ್ಥಿಗಳನ್ನೆ ಸರಕಾರ ಖಾಯಂ ನೌಕರರನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸ್ವಾತಂತ್ರ ಹೋರಾಟಗಾರ ಕೆ.ಸಿ.ನಾರಾಯಣಪ್ಪ ಆಗ್ರಹಿಸಿದ್ದಾರೆ.
ಶುಕ್ರವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಾರಿಕೆಯ 11 ತರಬೇತಿ ಕೇಂದ್ರಗಳಿದ್ದು, ಎಸೆಸೆಲ್ಸಿ ಉತ್ತೀರ್ಣರಾಗಿ ವ್ಯಾಸಂಗ ಮುಂದುವರಿಸದ ಗ್ರಾಮೀಣ ಅಭ್ಯರ್ಥಿಗಳಿಗೆ ಇಲಾಖೆ ತೋಟಗಾರಿಕೆ ಬೆಳೆಗಳ ಬಗ್ಗೆ ಪ್ರಾಯೋಗಿಕ ಮತ್ತು ಕೌಶಲ್ಯ ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲಿ 410 ತೋಟಗಾರಿಕಾ ಕ್ಷೇತ್ರಗಳು, 32 ಉದ್ಯಾನವನಗಳು ಮತ್ತು 3 ಗಿರಿಧಾಮಗಳಿದ್ದು, ಇಲಾಖೆಯಲ್ಲಿ 1ಸಾವಿರ ಹುದ್ದೆಗಳ ಖಾಲಿ ಇವೆ. 6 ಸಾವಿರ ಅಭ್ಯರ್ಥಿಗಳು ತೋಟಗಾರಿಕೆ ತರಬೇತಿ ಪಡೆದಿದ್ದು, ಅವರನ್ನೇ ಖಾಯಂಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿದ್ದ ತೋಟಗಾರಿಕೆ ತರಬೇತಿ ಪಡೆದ ಅಭ್ಯರ್ಥಿ ನವೀನ್ ಕುಮಾರ್ ಮಾತನಾಡಿ, ತೋಟಗಾರಿಕೆ ತರಬೇತಿ ಪಡೆದ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳನ್ನು ಖಾಯಂಗೊಳಿಸಲು ಆಗ್ರಹಿಸಿ ಜೂ.12ಕ್ಕೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ತೋಟಗಾರಿಕೆ ‘ಡಿ’ ದರ್ಜೆ ನೌಕರರ ಸಂಘ, ನವಕರ್ನಾಟಕ ಯುವ ಶಕ್ತಿ ಸಂಘದ ಆಶ್ರಯದಲ್ಲಿ ಧರಣಿ ನಡೆಸಲಾಗುವುದು ಎಂದು ಹೇಳಿದರು.