ನಾಟಕ ಪ್ರಕಾರವು ವಿಶಿಷ್ಟ ಅನುಭವದ ಗುಚ್ಚ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ

Update: 2018-06-08 14:33 GMT

ಬೆಂಗಳೂರು, ಜೂ.8: ಸಾಂಸ್ಕೃತಿಕ ಕ್ಷೇತ್ರದಲ್ಲಿ ನಾಟಕ ಪ್ರಾಕಾರವು ವಿಶಿಕ್ಷವಾದ ಕಲಾ ಪ್ರಕಾರವಾಗಿದ್ದು, ನಾಟಕದ ಪ್ರತಿ ಪ್ರದರ್ಶನದಲ್ಲೂ ಹೊಸ ಅನುಭವ ನೀಡುವಂತಹ ಅನುಭವಗಳ ಗುಚ್ಚ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಅಭಿಪ್ರಾಯಿಸಿದರು.

ಶುಕ್ರವಾರ ಕರ್ನಾಟಕ ನಾಟಕ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದ ಆಯ್ಕೆಯಾದ ಅಭ್ಯರ್ಥಿಗಳಿಗೆ 3 ದಿನಗಳ ಕಾಲ ಆಯೋಜಿಸಿರುವ ‘ಸಂಶೋಧನಾ ಪ್ರಬಂಧ ಮಾರ್ಗಸೂಚಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಾಹಿತ್ಯ ಮತ್ತು ನಾಟಕ ವಿಮರ್ಶಕರ ಸಂಖ್ಯೆ ಬೆರಳೆಣಿಕೆಯಷ್ಟಿದ್ದು, ಅದು ಹೆಚ್ಚುವಂತಾಗಬೇಕಿದೆ. ಸಿನಿಮಾಗಳಲ್ಲಿ ಅಭಿನಯಿಸಿದರೆ ಅದನ್ನು ಎಷ್ಟು ಬಾರಿ ನೋಡಿದರೂ ಒಂದೇ ಅಭಿನಯ ಇರುತ್ತದೆ. ಆದರೆ, ನಾಟಕದಲ್ಲಿ ಹಾಗಲ್ಲ. ಪ್ರತಿ ಭಾರಿಯೂ ಹೊಸ ಅನುಭವಗಳನ್ನು ನೀಡುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಟಕ ಕ್ಷೇತ್ರದಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ, ಅದಕ್ಕೆ ತಕ್ಕಂತೆ ಪ್ರಚಾರ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಾಟಕ ಪ್ರಕಾರವು ಮುನ್ನೆಲೆಗೆ ಬರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಸಕ್ತ ವಹಿಸಬೇಕಾದ ಅಗತ್ಯವಿದೆ ಎಂದು ಅವರು ಆಶಿಸಿದರು.

ಫೆಲೋಶಿಪ್ ಮಾರ್ಗಸೂಚಿ ಕಾರ್ಯಾಗಾರಕ್ಕೆ 35 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರಿಗೆ 3 ದಿನಗಳ ಕಾಲ ವಿದ್ವಾಂಸರಿಂದ ಉಪನ್ಯಾಸ ಹಾಗೂ ತರಬೇತಿ ನೀಡಲಾಗುತ್ತದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಶೈಲಜಾ ಮಾಹಿತಿ ನೀಡಿದರು.

ಈ ವೇಳೆ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ನಾಟಕ ವಿಮರ್ಶಾ ಸ್ಪರ್ಧೆ ವಿಜೇತ 10 ಜನರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶುಕುಮಾರ್, ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್, ರಿಜಿಸ್ಟ್ರಾರ್ ಶೈಲಜಾ, ರಂಗಶಂಕರ ಅಧ್ಯಕ್ಷ ಅಪ್ಪಯ್ಯ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News