ಬೆಂಗಳೂರು: ಖಾಸಗಿ ಕಂಪೆನಿಗೆ ಹುಸಿ ಬಾಂಬ್ ಬೆದರಿಕೆ ಕರೆ

Update: 2018-06-08 14:43 GMT

ಬೆಂಗಳೂರು, ಜೂ.8: ನಗರದ ಮಾರತಹಳ್ಳಿ ವ್ಯಾಪ್ತಿಯ ಪ್ರತಿಷ್ಠಿತ ಬ್ಯುಸಿನೆಸ್ ಪಾರ್ಕ್‌ನಲ್ಲಿರುವ ಸಿಕ್ಕೋ ಕಂಪೆನಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿರುವ ಘಟನೆ ಶುಕ್ರವಾರ ನಡೆದಿದೆ.

ಇಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ವ್ಯಕ್ತಿಯೋರ್ವ ಇಂಟರ್‌ನೆಟ್ ಮೂಲಕ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ , ಇನ್ನು 10 ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದ. ತಕ್ಷಣ ಪೊಲೀಸ್ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ.

ಈ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಸಿಸ್ಕೋ ಕಂಪೆನಿಯಲ್ಲಿದ್ದ ಎಲ್ಲ ಉದ್ಯೋಗಿಗಳನ್ನು ಹೊರಗೆ ಕಳುಹಿಸಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಯಿತು. ಆ ನಂತರ ಇದು ಹುಸಿ ಬಾಂಬ್ ಕರೆ ಅನ್ನೋದು ಖಚಿತವಾಯ್ತು ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಸೆಸ್ನಾ ಬ್ಯುಸಿನೆಸ್ ಪಾರ್ಕ್‌ನಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಭಯ ಬೀಳಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಂ ವಿಭಾಗದಲ್ಲೂ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News