ಅಧಿಕಾರ ಹಂಚಿಕೆಗೆ ಹೈಕಮಾಂಡ್ ಸೂತ್ರ: ದಿನೇಶ್‌ ಗುಂಡೂರಾವ್

Update: 2018-06-08 16:14 GMT

ಬೆಂಗಳೂರು, ಜೂ.8: ಸಮ್ಮಿಶ್ರ ಸರಕಾರದಲ್ಲಿ ಹೆಚ್ಚಿನ ಶಾಸಕರಿಗೆ ಅಧಿಕಾರ ಹಂಚಿಕೆ ಮಾಡಲು ಉತ್ತಮವಾದ ಸೂತ್ರವನ್ನು ಸಿದ್ಧಪಡಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವವರ ಅಧಿಕಾರ ಅವಧಿ ಎರಡು ವರ್ಷಗಳದ್ದಾಗಿರುತ್ತದೆ. ಆನಂತರ, ಸಚಿವರಾಗುವವರು ಮೂರು ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ. ಆದುದರಿಂದ, ಶಾಸಕರು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ಮನವಿ ಮಾಡಿದರು.

ಸಚಿವ ಸ್ಥಾನ ಕೈ ತಪ್ಪಿರುವ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡಿರುವ ಸತೀಶ್ ಜಾರಕಿಹೊಳಿ, ಮಲ್ಲೇಶ್ವರಂನಲ್ಲಿರುವ ದಿನೇಶ್‌ಗುಂಡೂರಾವ್ ಕಚೇರಿಗೆ ಭೇಟಿ ನೀಡಿ, ತಮ್ಮ ಅಸಮಾಧಾನಕ್ಕೆ ಸಂಬಂಧಿಸಿದ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದರು. ದಿನೇಶ್‌ ಗುಂಡೂರಾವ್ ಹಾಗೂ ಸಚಿವ ಕೃಷ್ಣ ಭೈರೇಗೌಡ, ಸತೀಶ್ ಜಾರಕಿಹೊಳಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು .

ಹೊಸದಿಲ್ಲಿಗೆ ಎಂ.ಬಿ.ಪಾಟೀಲ್
ಸಚಿವ ಸ್ಥಾನದಿಂದ ವಂಚಿತರಾಗಿ ತೀವ್ರ ಅಸಮಾಧಾನಗೊಂಡಿರುವ ಎಂ.ಬಿ. ಪಾಟೀಲ್‌ರನ್ನು ಹೊಸದಿಲ್ಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 5.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಹೊಸದಿಲ್ಲಿಗೆ ಪ್ರಯಾಣ ಬೆಳೆಸಿದರು.

ನಾವು ಅನಿವಾರ್ಯ ಪರಿಸ್ಥಿತಿಯಲ್ಲಿ ಸರಕಾರ ರಚನೆ ಮಾಡಿದ್ದೇವೆ. ಆದರೆ, ನಮ್ಮ ಕೈಗಳನ್ನು ಬೇರೆಯವರಿಗೆ ಕೊಡಲು ಆಗುವುದಿಲ್ಲ. ಪಕ್ಷ ಸುಲಭವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಬಹುದಿತ್ತು. ಮಾಜಿ ಸಚಿವ ಎಚ್.ಕೆ.ಪಾಟೀಲ್ ಜೊತೆ ಚರ್ಚೆ ಮಾಡಿದ್ದೇವೆ. ನಾವು ಯಾರನ್ನೂ ಟೀಕೆ ಮಾಡುವುದಿಲ್ಲ.
-ತನ್ವೀರ್‌ಸೇಠ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News