ಹದ ಮಣ್ಣಲ್ಲದೆ ಮಡಕೆಯಾಗಲಾರದು

Update: 2018-06-08 18:21 GMT

ಹದ ಮಣ್ಣಲ್ಲದೆ ಮಡಕೆಯಾಗಲಾರದು.

ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು.
ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ.
                          -ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ

 ಬೀದರ್ ಜಿಲ್ಲೆ ಭಾಲ್ಕಿಯ ಕುಂಬಾರ ಗುಂಡಯ್ಯನವರ ಸತಿ ಕೇತಲದೇವಿ ಬಸವಣ್ಣನವರ ಸಮಕಾಲೀನಳು. ವೃತ್ತಿಪರಿಭಾಷೆಯನ್ನು ಬಳಸಿ ವಚನ ರಚನೆ ಮಾಡಿದ ವಚನಕಾರ್ತಿಯರ ಸಾಲಿನಲ್ಲಿ ಕೇತಲದೇವಿಯೂ ಬರುತ್ತಾಳೆ. ಕಾಯಕ ಜೀವಿಗಳಾದ ವಚನಕಾರರಲ್ಲಿ ಬಹಳಷ್ಟು ಮಂದಿ ತಮ್ಮ ವೃತ್ತಿಪರಿಭಾಷೆಯನ್ನು ಬಳಸಿದ ಕಾರಣ ಕಾಯಕ ಪ್ರಧಾನವಾದ ಶರಣ ಸಿದ್ಧಾಂತ ಹೆಚ್ಚು ಆಕರ್ಷಕವಾಗಿದೆ. ಅನೇಕ ವಚನಕಾರ್ತಿಯರು ತಮ್ಮ ವೃತ್ತಿಪರಿಭಾಷೆಯ ಮೂಲಕ ತತ್ವಾನ್ವೇಷಣೆ ಮಾಡಿದ್ದಾರೆ. ‘‘ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ?’’ ಎಂದು ಕನ್ನಡಿ ಕಾಯಕದ ರೇಮಮ್ಮ ಕೇಳುತ್ತಾಳೆ. ‘‘ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ. ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ.’’ ಎಂದು ಕೊಟ್ಟಣದ ಸೋಮಮ್ಮ ಹೇಳುತ್ತಾಳೆ. ‘‘ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ, ಮಾತು ತಪ್ಪಿ ನುಡಿಯಲು ಬಾಯಿಗೆ ಮೂಲ’’ ಎಂದು ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ತಿಳಿಸುತ್ತಾಳೆ. ಹೀಗೆ ಕೇತಲದೇವಿ ಕುಂಬಾರ ಕಾಯಕದ ಅನುಭವದ ಮೂಲಕವೇ ಅನುಭಾವವನ್ನು ಉಸುರುತ್ತಾಳೆ.
 ‘ಹದ ಮಣ್ಣಲ್ಲದೆ ಮಡಕೆಯಾಗಲಾರದು’ ಎಂಬುದು ಅವಳ ಅನುಭವದ ಮಾತು. ಮಡಕೆ ತಯಾರಿಸಲು ಯೋಗ್ಯವಾದ ಮಣ್ಣು ಬೇಕು. ಆ ಮಣ್ಣನ್ನು ಸೋಸಿ ಸೋಸಿ ನುಣುಪುಗೊಳಿಸಬೇಕು. ಅದರಲ್ಲಿ ಮಣ್ಣಲ್ಲದೇ ಬೇರೆ ಯಾವುದೇ ಕಸ ಕಡ್ಡಿ ಹರಳುಗಳು ಇರಬಾರದು. ಅಂಥ ಮೃದು ಮಣ್ಣನ್ನು ನೀರಲ್ಲಿ ಕಲಸಿ ತುಳಿದು ತುಳಿದು ಹದಗೊಳಿಸಬೇಕು. ಆಗ ನೈಸರ್ಗಿಕ ಸಂಪನ್ಮೂಲವಾದ ಆ ಮಣ್ಣು ಹೀಗೆ ಮಡಕೆ ಮಾಡಲು ಬೇಕಾದ ಸಿದ್ಧವಸ್ತುವಾಗುವುದು. ಈ ರೀತಿ ಪ್ರತಿಯೊಬ್ಬನೂ ನೈಸರ್ಗಿಕ ಸಂಪನ್ಮೂಲವಾಗಿದ್ದಾನೆ. ಸಂಸ್ಕಾರದ ಮೂಲಕ ಆತ ಹದಗೊಳ್ಳಬೇಕು. ಆಗ ಅವನು ಅನುಭಾವ ತುಂಬಿದ ಘಟವಾಗುವನು. (ಮಡಕೆಗೂ ಶರೀರಕ್ಕೂ ಘಟ ಎನ್ನುತ್ತಾರೆ.)
ಶರೀರವು ಅನುಭಾವ ತುಂಬುವ ಘಟವಾಗಬೇಕಾದರೆ ನಾವು ಎಲ್ಲ ರೀತಿಯ ದೌರ್ಬಲ್ಯಗಳಿಂದ ಮುಕ್ತರಾಗಬೇಕು. ವ್ರತವೆಂದರೆ ಪವಿತ್ರವಾಗಿ ಬದುಕುವ ಪ್ರತಿಜ್ಞೆ ಮಾಡುವುದು ಮತ್ತು ಹಾಗೆ ಬದುಕುವುದು. ವ್ರತಾಚರಣೆಯಿಂದ ನಮ್ಮ ಮನಸ್ಸನ್ನು ಸೋಸಿ ಸೋಸಿ ಶುದ್ಧಗೊಳಿಸಿಕೊಳ್ಳಬೇಕು. ಅದನ್ನು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಹದಕ್ಕೆ ತರಬೇಕು. ಆಗ ಕಾಯವು ಪ್ರಸಾದಕಾಯವಾಗುವುದು. ಅದುವೇ ಅನುಭಾವದ ಘಟ. ಪ್ರಸಾದ ಕಾಯದವರು ಬದುಕಿನಲ್ಲಿ ಅಂಥವರ ಜೊತೆಯೇ ಬೆರೆಯಬೇಕು. ಏಕೆಂದರೆ ಎಮ್ಮೆಕರುವಿನ ಜೊತೆ ಆಕಳಕರುವೂ ಹೊಲಸಿನ ಕಡೆಗೆ ಹೋದ ಹಾಗೆ ಆಗುತ್ತದೆ. ಈ ಕಾರಣದಿಂದ ವ್ರತಹೀನನನ್ನು ಬೆರೆಯಲಾಗದು. ಹಾಗೆ ಹೋದರೆ ಬದುಕು ನರಕವಾಗುವುದು. ಈ ಕಾರಣದಿಂದಲೇ ತಾನು ಪವಿತ್ರವಾದ ಶರಣರ ಸಂಕುಲ ಬಿಟ್ಟು ಬೇರೆಲ್ಲಿಯೂ ಹೋಗುವುದಿಲ್ಲ ಎಂದು ಸೂಚಿಸುತ್ತಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News