×
Ad

ಬಾರಿಂದ್ರ ಘೋಷ್ ಎಂಬ ಕ್ರಾಂತಿಯ ರೂವಾರಿ

ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

Update: 2025-12-15 12:06 IST

"ಇವರಾರೂ ಕ್ಷಮೆ ಯಾಚಿಸಲಿಲ್ಲ!"

ಕಳೆದ ಐವತ್ತು ವರ್ಷಗಳಲ್ಲಿ ನಮ್ಮ ಪ್ರತಿಭಾವಂತರೆಲ್ಲ ಕ್ವಿಟ್ ಇಂಡಿಯಾ ಚಳವಳಿ ಮಾಡಿ ಅಮೆರಿಕಕ್ಕೆ ವಲಸೆ ಹೋಗಿ ಅಲ್ಲಿನ ಗ್ರೀನ್ ಕಾರ್ಡಿಗೆ ತವಕಿಸಿ ಅದನ್ನು ಪಡೆದದ್ದೇ ಜೀವನ ಧನ್ಯವಾಯಿತು ಎಂದು ಸಂಭ್ರಮಿಸಿದ್ದು ನೋಡಿದ್ದೇವೆ. ಮೋದಿ ಬಂದ ಬಳಿಕ ವರ್ಷಕ್ಕೆ ಲಕ್ಷಾಂತರ ಜನ ದೇಶದ ನಾಗರಿಕತ್ವ ತ್ಯಜಿಸಿ ವಿದೇಶದಲ್ಲಿ ನೆಲೆ ಗೊಳ್ಳುತ್ತಿದ್ದಾರೆ. ಈಗ ಟ್ರಂಪ್ ಈ ಎನ್‌ಆರ್‌ಐಗಳ ಬಗ್ಗೆ ಕೆಂಗಣ್ಣು ಬೀರಲಾರಂಭಿಸಿದ್ದು ಮುಂದೇನಾಗುತ್ತೋ ಗೊತ್ತಿಲ್ಲ.

ಇರಲಿ. ಆದರೆ ಸ್ವಾತಂತ್ರ್ಯ ಹೋರಾಟದ ಕಾಲ ಘಟ್ಟದಲ್ಲಿ ವಿದೇಶದಲ್ಲೇ ಇದ್ದ ಯುವಕರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಹಿಂಸೆ ಅನುಭವಿಸಿ ಕೆಲವರು ಹುತಾತ್ಮರೂ ಆದರು. ಗದ್ದರ್ ಕ್ರಾಂತಿಯ ಕರ್ತಾರ್ ಸಿಂಗ್ ಸರಭಾ, ಪಿಂಗ್ಲೇ ಇಂಥಾ ಹುತಾತ್ಮರು.

ಇವರೆಲ್ಲರಿಗೂ ಕಳಸ ಪ್ರಾಯ ಘೋಷ್ ಸಹೋದರರು. ಇಂಗ್ಲೆಂಡ್‌ನಲ್ಲಿ ಜನಿಸಿ ಅಲ್ಲೇ ಶಿಕ್ಷಣ, ಜೀವನ ನಡೆಸಬಹುದಾಗಿದ್ದ ಈ ಕುಟುಂಬದ ಈ ಧೀರೋದಾತ್ತ ಸಹೋದರರು ಭಾರತಕ್ಕೆ ಬಂದಿದ್ದಲ್ಲದೇ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಊದಿದರು.

ಅರೊಬಿಂದೋ ಘೋಷ್ ಹಿರಿಯಣ್ಣ, ಬಹುತೇಕ ಎಲ್ಲರಿಗೂ ಅವರ ಬಗ್ಗೆ ಗೊತ್ತು. ಅವರ ತಮ್ಮ ಬಾರಿಂದ್ರ ಘೋಷ್ ಇನ್ನೂ ಪ್ರಖರ ಕ್ರಾಂತಿಕಾರಿ. ಭಾರತಕ್ಕೆ ಮರಳಿ ಕಲ್ಕತ್ತಾ, ಢಾಕಾದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ ಬಾರೀನ್ ತನ್ನ ಅಣ್ಣ ಅರೊಬಿಂದೋ ಅವರಿಂದ ಪ್ರಭಾವಿತರಾಗಿದ್ದರು. ಭಾರತ ಕಂಡ ಅಪ್ರತಿಮ ಪ್ರತಿಭೆ ಅರೊಬಿಂದೋ.

1902ಕ್ಕೆ ಕಲ್ಕತ್ತಾಕ್ಕೆ ಮರಳಿದ ಬಾರಿನ್, ಜತಿನ್ ದಾ ಅವರೊಂದಿಗೆ ಕೈ ಜೋಡಿಸಿ ಕ್ರಾಂತಿಕಾರಿ ಸಂಘಟನೆಯ ಸ್ಥಾಪನೆಗೆ ಕೈ ಹಾಕಿದರು. 1906ರಲ್ಲಿ ಅವರು ಕ್ರಾಂತಿಕಾರಿ ಸಂಘಟನೆಗಳ ಮುಖವಾಣಿ ‘ಜುಗಾಂತರ್’ ಪತ್ರಿಕೆಯನ್ನು ಸ್ಥಾಪಿಸಿ ಆ ಮೂಲಕ ಬೆಂಕಿಯುಂಡೆಯಂತಹ ಲೇಖನಗಳನ್ನು ಸತತವಾಗಿ ಪ್ರಕಟಿಸಿದರು. ಇದರೊಂದಿಗೆ ಸಶಸ್ತ್ರ ಕ್ರಾಂತಿಗಾಗಿ ಬಾಂಬ್ ತಯಾರು ಮಾಡಲಾರಂಭಿಸಿದರು. ಇಂತಹ ಒಂದು ಬಾಂಬನ್ನೇ 1908ರಲ್ಲಿ ಖುದಿರಾಮ್ ಬೋಸ್ ಬಳಸಿದ್ದು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಬಹುತೇಕ ಇದರ ರೂವಾರಿಗಳನ್ನು ಬಂಧಿಸಿದರು. ಅಲೀಪುರ್ ಬಾಂಬು ಪ್ರಕರಣವೆಂದೇ ಖ್ಯಾತಿ ಪಡೆದ ಈ ಪ್ರಕರಣದಲ್ಲಿ ಘೋಷ್ ಸಹೋದರರಿಬ್ಬರನ್ನೂ ಬಂಧಿಸಲಾಯಿತು. ಈ ಪ್ರಕರಣದಲ್ಲಿ ಅರೊಬಿಂದೋ, ಬಾರಿನ್ ಮತ್ತು ಉಲ್ಲಾಸ್ಕರ್ ದತ್ತರಿಗೆ ಮೊದಲು ಮರಣ ದಂಡನೆ ವಿಧಿಸಲಾಯಿತಾದರೂ, ಬಳಿಕ ಜೀವಾವಧಿಗೆ ಇಳಿಸಿ ಬಾರಿನ್ ಮತ್ತು ಉಲ್ಲಾಸ್ಕರ್ ದತ್ತ ಅವರನ್ನು ಅಂಡಮಾನ್‌ಗೆ ರವಾನಿಸಲಾಯಿತು. ಅರೊಬಿಂದೋ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆ ಮಾಡಿದರೂ ಮತ್ತೆ ಬಂಧಿಸಿಡಲಾಯಿತು. ಈ ವೇಳೆಗೆ ಅರೊಬಿಂದೋ ಅವರು ತಪ್ಪಿಸಿಕೊಂಡು ಪಾಂಡಿಚೇರಿಗೆ ಹೋದರು. ಅಲ್ಲಿಂದಾಚೆ ಅವರು ಸಂಪೂರ್ಣ ಅಧ್ಯಾತ್ಮ ಸಾಧನೆಯಲ್ಲಿ ನಿರತರಾದರು.

ಬಾರಿನ್ ಅಂಡಮಾನ್‌ನಿಂದ 1915ರಲ್ಲಿ ತಪ್ಪಿಸಿಕೊಂಡು ಭಾರತ ಸೇರಿದರೂ ಬಾಘಾ ಜತಿನ್ ಹುತಾತ್ಮನಾದ ಬಳಿಕ ಪುರಿಯಲ್ಲಿ ಬಾರಿನ್ ಅವರನ್ನು ಹಿಡಿದರು. ಮತ್ತೆ ಅವರನ್ನು ಅಂಡಮಾನ್‌ಗೆ ಕಳಿಸಲಾಯಿತು.

ಪ್ರಾಯಶಃ ಅಂಡಮಾನ್‌ನಿಂದ ತಪ್ಪಿಸಿಕೊಂಡ ಏಕೈಕ ಹೋರಾಟಗಾರ ಬಾರಿನ್ ಇರಬಹುದು.

ಅಲ್ಲಿ ಅವರನ್ನು ಐದು ವರ್ಷಗಳ ಕಾಲ ಏಕಾಂತ ಶಿಕ್ಷೆಗೆ ಗುರಿ ಮಾಡಲಾಯತು. 1920ರಲ್ಲಿ ಬ್ರಿಟಿಷ್ ಸರಕಾರ ಅವರನ್ನು ಬಿಡುಗಡೆ ಮಾಡಿತು. ತಮ್ಮ ಅಂಡಮಾನ್ ಅನುಭವದ ಬಗ್ಗೆ ಬಾರಿನ್ ಅವರು ಬರೆದ ಕೃತಿ ಅದ್ಭುತ. ಬ್ರಿಟಿಷ್ ಪೊಲೀಸರ ಹಸಿಹಸಿ ಕ್ರೌರ್ಯದ ವಿವರ ಓದಿದರೆ ದಿಗ್ಭ್ರಮೆಯಾಗುತ್ತದೆ.

ಭಾರತಕ್ಕೆ ಮರಳಿದ ಬಾರಿನ್ ಪತ್ರಿಕೋದ್ಯಮದತ್ತ ಹೊರಳಿದರು. ಅಲ್ಲೂ ನಿಲ್ಲದ ಬಾರಿನ್ 1923ರಲ್ಲಿ ಅಣ್ಣ ಅರೊಬಿಂದೋ ಅವರ ಪಾಂಡಿಚೇರಿಯ ಆಶ್ರಮ ಸೇರಿದರು. ಆರು ವರ್ಷಗಳ ಕಾಲ ಸಾಧನೆಯಲ್ಲಿ ತೊಡಗಿದ್ದ ಬಾರಿನ್ ಮತ್ತೆ ಕಲ್ಕತ್ತಾಕ್ಕೆ ಮರಳಿದರು. 1933ರಲ್ಲಿ ಅವರು, ಖಿhe ಆಚಿತಿಟಿ oಜಿ Iಟಿಜiಚಿ ಎಂಬ ಸಾಪ್ತಾಹಿಕವನ್ನು ಆರಂಭಿಸಿದರು. ಬಳಿಕ ‘ದಿ ಸ್ಟೇಟ್ಸ್ ಮನ್’ ಪತ್ರಿಕೆಯಲ್ಲೂ ಕೆಲಸ ಮಾಡಿದರು. 1950ರಲ್ಲಿ ‘ದೈನಿಕ್ ಬಾಸುಮತಿ’ ಎಂಬ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು.

1933ರಲ್ಲಿ ಶೈಲಜಾ ದತ್ತ ಎಂಬ ವಿಧವೆಯನ್ನು ವಿವಾಹವಾದರು. 1959ರ ಎಪ್ರಿಲ್ 18ರಂದು ಬಾರಿನ್ ವಯೋಸಹಜ ಕಾರಣಗಳಿಂದ ಕಾಲವಾದರು.

ತನ್ನ ಕ್ರಾಂತಿಕಾರಿ ಕಾಣ್ಕೆಯಿಂದ ಹಿಡಿದು ಆಧ್ಯಾತ್ಮಿಕ ಪಯಣಗಳುದ್ದಕ್ಕೂ ಬಾರಿನ್ ಅಣ್ಣ ಅರೊಬಿಂದೋ ಅವರ ಅನುವರ್ತಿಯಾಗಿದ್ದರು. ಎಲ್ಲಾ ಧರ್ಮಗಳ ಉತ್ತಮಾಂಶಗಳನ್ನು ಹೆಣೆದ ಒಂದು ಜೀವನ ದೃಷ್ಟಿಯನ್ನು ಹೊಂದಿದ್ದ ಬಾರಿನ್ ಸಂಕುಚಿತ ಧಾರ್ಮಿಕ ಮನಸ್ಸು ಹೊಂದಿರಲಿಲ್ಲ.

ರಾಷ್ಟ್ರೀಯವಾದಿ ಕ್ರಾಂತಿಕಾರಿ ಧೋರಣೆಯ ಮೊದಲ ಪೀಳಿಗೆಯ ಆದ್ಯರಲ್ಲೊಬ್ಬರಾದ ಬಾರಿನ್ ಘನತೆಯಿಂದ ಬಾಳಿದರು. ಅರ್ಥಪೂರ್ಣವಾಗಿ ಬದುಕಿದರು. ಬಾರಿನ್ ತರುವಾಯದ ತರುಣ ಪೀಳಿಗೆ ರಶ್ಯಕ್ರಾಂತಿಯಿಂದ

ಪ್ರಭಾವಿತರಾಗಿ ಸಂಕುಚಿತ ರಾಷ್ಟ್ರೀಯ ಮನೋಧರ್ಮವನ್ನು ಮೀರಿ ವಿಶ್ವಾತ್ಮಕ ಕಾಣ್ಕೆಯ ಪ್ರಣಾಲಿಯನ್ನು ಮುಂದಿಟ್ಟು ಹೋರಾಡಿದರು.

ಇದೇ ವೇಳೆಗೆ ಅರೊಬಿಂದೋ ಘೋಷ್‌ಗೆ

ತದ್ವಿರುದ್ಧವಾದ ಹಿಂದೂ ಸುಪ್ರಮಸಿ, ಹಿಂದೂ ರಾಷ್ಟ್ರೀಯತೆ, ಮುಸ್ಲಿಮ್ ದ್ವೇಷದ ಮಿಸಳ ಭಾಜಿಯ ತಾತ್ವಿಕ ಪ್ರಣಾಲಿಯನ್ನು ಸಾವರ್ಕರ್ ಪ್ರಚುರಗೊಳಿಸುತ್ತಾ ಬಂದರು. ಆ ತಲೆಮಾರಿನ ಒಬ್ಬನೇ ಒಬ್ಬ ಕ್ರಾಂತಿಕಾರಿಯೂ ಸಾವರ್ಕರ್ ಅವರ ಸಿದ್ಧಾಂತಕ್ಕೆ ಮಣೆ ಹಾಕಲಿಲ್ಲ ಎಂಬುದು ಈ ಕ್ರಾಂತಿಕಾರಿಗಳ ಬೌದ್ಧಿಕ ಔನ್ನತ್ಯ ಮತ್ತು ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುರೇಶ್ ಕಂಜರ್ಪಣೆ

contributor

Similar News