ಸಹಯೋಗ್ ವೇದಿಕೆಯಡಿ ಮೊದಲ ವರ್ಷ ದಿನಕ್ಕೆ ಸರಾಸರಿ 6 ಕಂಟೆಂಟ್ ಬ್ಲಾಕ್ ಆದೇಶ!
credit : indianexpress
ಸಹಯೋಗ್ ವೇದಿಕೆಯಡಿ ಕೇಂದ್ರ ಗೃಹಸಚಿವಾಲಯ ದಿನಕ್ಕೆ ಸರಾಸರಿ 6 ಕಂಟೆಂಟ್ ಬ್ಲಾಕ್ ಆದೇಶ ನೀಡಿದೆ. ಇದು ಈಗ ಭಾರತದ ಅಂತರ್ಜಾಲ ಸೆನ್ಸಾರ್‌ಶಿಪ್ ರೂಪುರೇಷೆಯಲ್ಲಿ ಕೇಂದ್ರೀಯ ಸಾಧನವಾಗಿ ಬದಲಾಗಿದೆ.
ಭಾರತದ ಗೃಹಸಚಿವಾಲಯದ ವೇದಿಕೆಯಾಗಿರುವ ಸಹಯೋಗ್ ಪೋರ್ಟಲ್ ಆರಂಭವಾಗಿ ವರ್ಷ ಕಳೆದಿದೆ. ಕಳೆದೊಂದು ವರ್ಷದಲ್ಲಿ ಈ ವೇದಿಕೆ ನೀಡಿರುವ ಆದೇಶಗಳನ್ನು ನೋಡಿದರೆ ಭಾರತದಲ್ಲಿ ಅಂತರ್ಜಾಲ ಸೆನ್ಸಾರ್ಶಿಪ್‌ನ ರೂಪುರೇಷೆಯಲ್ಲಿ ಇದು ಹೇಗೆ ಕೇಂದ್ರೀಯ ಸಾಧನವಾಗಿದೆ ಎನ್ನುವುದನ್ನು ಅರಿತುಕೊಳ್ಳಬಹುದು.
ಏನಿದು ಸಹಯೋಗ್ ಪೋರ್ಟಲ್?
ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳಲ್ಲಿ ಆನ್‌ಲೈನ್ ಕಂಟೆಂಟ್‌ಗಳನ್ನು ತೆಗೆದು ಹಾಕಲು ಸೂಚನೆಗಳನ್ನು ತ್ವರಿತವಾಗಿ ನಿರ್ವಹಿಸಲು ಭಾರತದ ಐಟಿ ಕಾಯ್ದೆಯಡಿ ಸರಕಾರಿ ಸಂಸ್ಥೆಗಳು ಮತ್ತು ಅಂತರ್ಜಾಲದ ಸಂಸ್ಥೆಗಳ ಜೊತೆಗೆ ಸಂಪರ್ಕಿಸಲು ಸಹಯೋಗ್ ಸಹಾಯ ಮಾಡುತ್ತದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಈ ಸಹಯೋಗ್ ಪೋರ್ಟಲ್ 2024 ಅಕ್ಟೋಬರ್ ಮತ್ತು 2025 ಅಕ್ಟೋಬರ್ ನಡುವೆ ಒಂದು ವರ್ಷದಲ್ಲಿ ಫೇಸ್‌ಬುಕ್, ಯುಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಮೊದಲಾದ 19 ಆನ್‌ಲೈನ್ ವೇದಿಕೆಗಳಿಗೆ 2,300 ಬ್ಲಾಕಿಂಗ್ ಆದೇಶಗಳನ್ನು ನೀಡಲಾಗಿದೆ.
ಮೆಟಾ ಸಂಸ್ಥೆಗೆ ಅತ್ಯಧಿಕ ಬ್ಲಾಕಿಂಗ್ ಆದೇಶ
ಆರ್‌ಟಿಐ ಅಪ್ಲಿಕೇಶನ್‌ಗೆ ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (14ಸಿ) ನೀಡಿದ ಉತ್ತರದಲ್ಲಿ ಹೇಳಿರುವ ಪ್ರಕಾರ, “2,312 ಆದೇಶಗಳಲ್ಲಿ ಆನ್‌ಲೈನ್ ಸೇವೆ ನೀಡುವ ಮೆಟಾ ಸಂಸ್ಥೆಯ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್ಆ್ಯಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್‌ಗಳಿಗೆ ಶೇ 78ರಷ್ಟು ಬ್ಲಾಕಿಂಗ್ ಆದೇಶಗಳು ಹೋಗಿವೆ. ವಾಟ್ಸ್ಆ್ಯಪ್ ಸಂಸ್ಥೆ ಅತ್ಯಧಿಕ ಸಂಖ್ಯೆಯಲ್ಲಿ ಬ್ಲಾಕಿಂಗ್ ಆದೇಶವನ್ನು ಪಡೆದಿದೆ. 1392ರಷ್ಟು ಭಾರಿ ವಾಟ್ಸ್ಆ್ಯಪ್‌ನಿಂದ ಕಂಟೆಂಟ್ ತೆಗೆಯುವಂತೆ ಆದೇಶ ಹೋಗಿದೆ. ಮುಂದಿನ ಸ್ಥಾನದಲ್ಲಿರುವ ಫೇಸ್‌ಬುಕ್‌ನಿಂದ 255 ಮತ್ತು ಇನ್ಸ್ಟಾಗ್ರಾಮ್‌ಗೆ 169 ಆದೇಶ ಹೋಗಿದೆ. ಈ ವೇದಿಕೆಗಳು ಕಳೆದೊಂದು ವರ್ಷದಲ್ಲಿ ಸರಕಾರದಿಂದ 1,816 ಬ್ಲಾಕಿಂಗ್ ಆದೇಶಗಳನ್ನು ಸ್ವೀಕರಿಸಿವೆ.
ಯುಟ್ಯೂಬ್ 176 ಬ್ಲಾಕಿಂಗ್ ಆದೇಶ ಸ್ವೀಕರಿಸಿದೆ. ಸಂದೇಶ ಆ್ಯಪ್ ಟೆಲಿಗ್ರಾಂ 123 ಬ್ಲಾಕಿಂಗ್ ಆದೇಶ ಸ್ವೀಕರಿಸಿದೆ. ಗೂಗಲ್ ಸಂಸ್ಥೆ 93, ಆ್ಯಪಲ್ ಸಂಸ್ಥೆ 43 ಮತ್ತು ಅಮೆಜಾನ್ 23 ಆದೇಶಗಳನ್ನು ಸ್ವೀಕರಿಸಿವೆ. ಉಳಿದ 38 ಆದೇಶಗಳನ್ನು ಇತರ 11 ಆ್ಯಪ್‌ಗಳಾದ ಮೈಕ್ರೋಸಾಫ್ಟ್ (10), ಲಿಂಕ್ಡಿನ್ (2) ಮತ್ತು ಸ್ನ್ಯಾಪ್‌ಚಾಟ್ (1)ಗೆ ನೀಡಲಾಗಿದೆ. ಪ್ರತಿಯೊಂದು ಆದೇಶದಲ್ಲಿ ಒಂದಕ್ಕಿಂತ ಹೆಚ್ಚು ಲಿಂಕ್‌ಗಳನ್ನು ನೀಡಲಾಗಿತ್ತು.
ಅಪರೇಷನ್ ಸಿಂಧೂರ್ ಸಂದರ್ಭದಲ್ಲಿ ವ್ಯಾಪಕ ಆದೇಶ
2025ರ ಮೇ ತಿಂಗಳಲ್ಲಿ ಆಪರೇಶನ್ ಸಿಂಧೂರ್ ಸಮಯದಲ್ಲಿ ಸರಕಾರ ಪಾಕಿಸ್ತಾನದ ಹ್ಯಾಂಡಲ್‌ಗಳು ಅಂತರ್ಜಾಲದಲ್ಲಿ ಪ್ರಚಾರಾಭಿಯಾನ ನಡೆಸುತ್ತಿವೆ ಎಂದು ಹೇಳಿ ಬಹಳಷ್ಟು ಬ್ಲಾಕಿಂಗ್ ಆದೇಶಗಳನ್ನು ನೀಡಿತ್ತು. ಎಕ್ಸ್ (ಈ ಹಿಂದೆ ಟ್ವಿಟರ್) ಸಾಮಾಜಿಕ ಜಾಲತಾಣ ಆ ಸಂದರ್ಭದಲ್ಲಿ 8000 ಖಾತೆಗಳನ್ನು ಬ್ಲಾಕ್ ಮಾಡುವಂತೆ ಸರ್ಕಾರದಿಂದ ಆದೇಶ ಸ್ವೀಕರಿಸಿತ್ತು. ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಮತ್ತು ಪ್ರಮುಖ ಎಕ್ಸ್ ಬಳಕೆದಾರರ ಖಾತೆಗಳನ್ನು ಬ್ಲಾಕ್ ಮಾಡಲಾಗಿತ್ತು.
ಬೆಳೆಯುತ್ತಾ ಹೋಗಿರುವ ಸಹಯೋಗ್
ಇದೀಗ ಸಹಯೋಗ್ ವೇದಿಕೆಯಲ್ಲಿ 118 ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದಾರೆ. 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿಗಳು ಮತ್ತು ಏಳು ಕೇಂದ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಹಯೋಗ್ ವೇದಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಕ್ಷಣಾ ಸಚಿವಾಲಯ, ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ, ಭಾರೀ ಕೈಗಾರಿಕೆಗಳ ಸಚಿವಾಲಯ, ಹಣಕಾಸು ಗುಪ್ತಚರ ಘಟಕ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರತಿನಿಧಿಗಳು ಸಹಯೋಗ್ ವೇದಿಕೆಯಲ್ಲಿದ್ದಾರೆ.
ನೋಟಿಸ್‌ಗಳ ರೀತಿಯಲ್ಲಿ ಕಳುಹಿಸಲಾಗುವ ಆದೇಶಗಳನ್ನು 2000ದ ಮಾಹಿತಿ ಕಾಯ್ದೆಯ (ಐಟಿ) ಸೆಕ್ಷನ್ 79 (3) (ಬಿ) ಅಡಿಯಲ್ಲಿ ನೀಡಲಾಗುತ್ತಿದೆ. ಈ ಸೆಕ್ಷನ್ ಅಡಿಯಲ್ಲಿ ಆನ್‌ಲೈನ್ ಸಂಸ್ಥೆಗಳು ಸರ್ಕಾರದ ಆದೇಶವನ್ನು ಅನುಸರಿಸಲು ನಿರಾಕರಿಸಿದಲ್ಲಿ ದೇಶದಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ.
ಕೃಪೆ: indianexpress