ಕಥುವಾ ಸಂತ್ರಸ್ತೆಯ ಗುರುತು ಬಹಿರಂಗ: ದಂಡ ಪಾವತಿಸಿದ 11 ಪ್ರಮುಖ ಮಾಧ್ಯಮ ಸಂಸ್ಥೆಗಳು

Update: 2018-06-09 09:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜೂ.9: ಕಥುವಾ ಅತ್ಯಾಚಾರ ಸಂತ್ರಸ್ತೆಯಾಗಿರುವ ಅಪ್ರಾಪ್ತ ಬಾಲಕಿಯ ಗುರುತನ್ನು ಬಹಿರಂಗಪಡಿಸಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಒಟ್ಟು 11 ಪ್ರಮುಖ ಮಾಧ್ಯಮ ಸಂಸ್ಥೆಗಳು 1.1 ಕೋಟಿ ರೂ. ದಂಡ ಪಾವತಿಸಿವೆ.

ದಿ ಟೈಮ್ಸ್ ಆಫ್ ಇಂಡಿಯಾ, ಹಿಂದುಸ್ತಾನ್ ಟೈಮ್ಸ್, ದಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಹಿಂದು, ಎನ್‌ಡಿಟಿವಿ, ಪಯೊನೀರ್, ರಿಪಬ್ಲಿಕ್ ಟಿವಿ, ಡೆಕ್ಕನ್ ಕ್ರಾನಿಕಲ್, ದಿ ವೀಕ್, ದಿ ಸ್ಟೇಟ್ಸ್‌ಮ್ಯಾನ್, ಇಂಡಿಯಾ ಟಿವಿ ಹಾಗೂ ಫಸ್ಟ್ ಪೋಸ್ಟ್ ಮಾದ್ಯಮ ಸಂಸ್ಥೆಗಳಿಗೆ ತಲಾ 10 ಲಕ್ಷ ರೂ. ದಂಡವನ್ನು ದಿಲ್ಲಿ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ವಿಧಿಸಿದ್ದರು.

ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಡೆಕ್ಕನ್ ಕ್ರಾನಿಕಲ್ ದಂಡ ಮೊತ್ತ ಇನ್ನಷ್ಟೇ ಪಾವತಿಸಬೇಕಿರುವುದರಿಂದ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇತರ ಪತ್ರಿಕೆಗಳಿಂದ ಸಂಗ್ರಹಿಸಲಾದ ದಂಡ ಮೊತ್ತವನ್ನು ಜಮ್ಮು ಕಾಶ್ಮೀರ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಠೇವಣಿಯಿರಿಸಲಾಗಿದ್ದು, ಇದನ್ನು ಲೈಂಗಿಕ ಹಿಂಸೆಯ ಸಂತ್ರಸ್ತರು ಮೃತಪಟ್ಟಾಗ ಅವರ ಕುಟುಂಬಗಳಿಗೆ ನೀಡಲಾಗುತ್ತದೆ.

ಆರಂಭದಲ್ಲಿ ಮುಖ್ಯ ನ್ಯಾಯಾಧೀಶೆ ಮಿತ್ತಲ್ ಮಾಧ್ಯಮ ಸಂಸ್ಥೆಗಳಿಗೆ ತಲಾ 25 ಲಕ್ಷ ರೂ. ದಂಡ ವಿಧಿಸಬೇಕೆಂದಿದ್ದರೂ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವ ಶಕ್ತಿಯಿಲ್ಲವೆಂದು ಕೆಲ ಮಾಧ್ಯಮ ಸಂಸ್ಥೆಗಳ ವಕೀಲರು ಹೇಳಿಕೊಂಡಿದ್ದರಿಂದ ದಂಡ ಮೊತ್ತವನ್ನು ಕಡಿಮೆಗೊಳಿಸಲಾಗಿದೆ. ಕಥುವಾ ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಮಾಧ್ಯಮಗಳನ್ನು ಪತ್ತೆ ಹಚ್ಚಲು ನ್ಯಾಯಾಲಯ ಮೇ 18ರಂದು ಹಿರಿಯ ವಕೀಲ ಅರವಿಂದ ನಿಗಮ್ ಅವರನ್ನು ಅಮಿಕಸ್ ಕ್ಯುರಿ ಆಗಿ ನೇಮಿಸಿತ್ತು

ವಿದೇಶಿ ಮಾಧ್ಯಮ ಸಂಸ್ಥೆಗಳಾದ ಅಲ್ ಜಝೀರಾ ಮತ್ತು ಬರ್ ಫೀಡ್ ಇವುಗಳ ಸ್ಥಳೀಯ ವೆಬ್ ತಾಣಗಳು ಭಾರತೀಯ ಕಂಪೆನಿಗಳೆಂದು ಪರಿಗಣಿಸಲ್ಪಟ್ಟಿದ್ದರಿಂದ ಅವುಗಳಿಗೂ ದಂಡ ವಿಧಿಸಲಾಗುವುದು ಎಂದು ತಿಳಿದು ಬಂದಿದೆ.

ನ್ಯಾಯಾಲಯವು ಫೇಸ್ ಬುಕ್, ಯುಟ್ಯೂಬ್ ಹಾಗೂ ಗೂಗಲ್ ಇಂಡಿಯಾ ಸಂಸ್ಥೆಗಳಿಗೂ ನೋಟಿಸ್ ಕಳುಹಿಸಿತ್ತಾದರೂ ಅವುಗಳು ಇನ್ನಷ್ಟೇ ದಂಡ ಪಾವತಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News