ಎನ್.ಮಹೇಶ್ ಉಳಿದೆಲ್ಲ ಸಚಿವರಿಗಿಂತ ಸೂಕ್ಷ್ಮವಾಗಿ ಕೆಲಸ ಮಾಡಬಲ್ಲರು: ಡಾ.ಎಲ್.ಹನುಮಂತಯ್ಯ

Update: 2018-06-09 14:12 GMT

ಬೆಂಗಳೂರು, ಜೂ.9: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಮಂತ್ರಿ ಮಂಡಲದಲ್ಲಿ ಉಳಿದೆಲ್ಲ ಸಚಿವರಿಗಿಂತ ಬಿಎಸ್ಪಿಯಿಂದ ಆಯ್ಕೆಯಾಗಿರುವ ಎನ್.ಮಹೇಶ್ ಹೆಚ್ಚು ಸೂಕ್ಷ್ಮವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಎಲ್.ಹನುಮಂತಯ್ಯ ಅಭಿಪ್ರಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ದಲಿತ ಚೇತನ ಪ್ರೊ.ಬಿ.ಕೃಷ್ಣಪ್ಪರವರ 80ನೆ ಜನುಮ ದಿನದ ಅಂಗವಾಗಿ ಆಯೋಜಿಸಿದ್ದ ‘ಸಾಮಾಜಿಕ ಸಮತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಎಸ್ಪಿ ಅಭ್ಯರ್ಥಿ ಎನ್.ಮಹೇಶ್ ಸಚಿವರಾಗಿರುವುದು ದಸಂಸ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಇವತ್ತು ಬದುಕಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು. ಅವರು ನಂಬಿದ್ದ ತತ್ವ ಸಿದ್ಧಾಂತಗಳನ್ನು ಹಿಡಿದುಕೊಂಡು ಎನ್.ಮಹೇಶ್ ಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ಆ ಮೂಲಕ ಅಧಿಕಾರ ರಾಜಕಾರಣದಲ್ಲಿ ದಲಿತ ಸಮುದಾಯಕ್ಕೆ ದೊಡ್ಡ ಶಕ್ತಿ ಸಿಕ್ಕಿದಂತಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇವತ್ತಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಹೋರಾಟಗಾರರು, ಜನಚಳುವಳಿಗಳ ನಾಯಕರು ಅಧಿಕಾರಕ್ಕೆ ಬರಬೇಕು. ಅಂತವರು ಅಧಿಕಾರಕ್ಕೆ ಬಂದರೆ ಪಾರಂಪರಿಕ ರಾಜಕಾರಣಿಗಳಿಗಿಂತ ಸಾವಿರ ಪಟ್ಟು ಹೆಚ್ಚು ಕೆಲಸ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಜನಪರವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕೂಡ ಅವರು ತೋರಿಸಿಕೊಡಬಲ್ಲರು ಎಂದು ಅವರು ಹೇಳಿದರು.

ದಲಿತ ಸಮುದಾಯ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವುದನ್ನು ಕಲಿತಿದೆ. ಆದರೆ, ಓಟಿನ ರಾಜಕಾರಣದಲ್ಲಿ ಪದೇ ಪದೇ ಸೋಲುತ್ತಿದೆ. ನಮ್ಮ ಮತವನ್ನು ನಮ್ಮವರಿಗೆ, ನಮ್ಮ ಹಿತವನ್ನು ಬಯಸುವವರಿಗೆ ಹಾಕುವಂತಹ ಪ್ರಜ್ಞೆ, ಜಾಗೃತಿಯನ್ನು ಇನ್ನೂ ಬೆಳೆಸಿಕೊಂಡಿಲ್ಲ. ಯಾರಿಗೆ ಮತ ಹಾಕಬೇಕೆಂಬ ಖಚಿತವಾದ ರಾಜಕೀಯ ಜಾಗೃತಿ ದಲಿತ ಸಮುದಾಯಕ್ಕೆ ಬಂದಿದೆ. ಆದರೆ, ನಮ್ಮನ್ನು ತಡೆಯುವಂತಹ ಶಕ್ತಿ ಯಾರಿಗೂ ಸಾಧ್ಯವಾಗುವುದಿಲ್ಲವೆಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, 1974ರಲ್ಲಿ ಬಿ.ಕೃಷ್ಣಪ್ಪ ಭದ್ರಾವತಿಯಲ್ಲಿ ದಸಂಸ ಪ್ರಾರಂಭಿಸಿದರು. ದಸಂಸದ ಪ್ರಾರಂಭದ ದಿನಗಳು ನಿರಂತರವಾಗಿ ಅವಮಾನ, ಶೋಷಣೆ, ಯಾತನೆಗಳನ್ನು ಅನುಭವಿಸಿದ್ದೇವೆ. ಹಳ್ಳಿ-ಹಳ್ಳಿಗಳಿಗೆ ನಡೆದುಕೊಂಡು ಹೋಗಿ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡಿ ಸಂಘಟನೆಗಳನ್ನು ಕಟ್ಟಲಾಗಿದೆ. ಇದನ್ನು ದಲಿತ ಸಮುದಾಯದ ಯುವ ತಲೆಮಾರು ತಿಳಿಯಬೇಕಾಗಿದೆ ಎಂದು ತಿಳಿಸಿದರು.

60-70ದಶಕಗಳಲ್ಲಿ ದಲಿತ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದವು. ಅದನ್ನು ಪ್ರಶ್ನಿಸುವಂತಹ ಧೈರ್ಯವಾಗಲಿ, ಅರಿವಾಗಲಿ ಯಾರಿಗೂ ಇರಲಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಾರಂಭಗೊಂಡ ದಸಂಸ ಇಲ್ಲಿಯವರೆಗೂ ಪ್ರಜ್ವಲಿಸುತ್ತಲೆ ಇದೆ. ಇವತ್ತು ದಲಿತ ಸಮುದಾಯ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಕನಿಷ್ಠಮಟ್ಟಿಗಾದರೂ ಮುನ್ನೆಲೆಗೆ ಬಂದಿದೆಯೆಂದರೆ ದಸಂಸ ಹೋರಾಟದ ಫಲವೆಂದು ಅಭಿಪ್ರಾಯಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ, ಹಿಂದಿನ ದಿನಗಳಲ್ಲಿ ಚಳವಳಿ ಎನ್ನುವುದು ಬದ್ಧತೆಯಾಗಿತ್ತು. ಆದರೆ, ಈಗ ಕೆಲವರಿಗೆ ಬಂಡವಾಳವಾಗಿದೆ. ಇಂತಹ ಸ್ವಾರ್ಥಿಗಳನ್ನು ಬಲಪಂಥಿಯರು ಬಳಸಿಕೊಂಡು ಚಳವಳಿಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ವಿಷಾದಿಸಿದರು.

ದಸಂಸ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಯುವ ಸಮುದಾಯ ದಲಿತ ಚಳವಳಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ವರ್ತಮಾನದಲ್ಲಿ ಎದುರಾಗುತ್ತಿರುವ ಎಲ್ಲ ಸವಾಲುಗಳಿಗೆ ಸರಿಯಾದ ಪ್ರತಿರೋಧವನ್ನು ಒಡ್ಡಬೇಕಾಗಿದೆ. ಆ ನಿಟ್ಟಿನಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಹಿರಿಯ ಪತ್ರಕರ್ತ ದಿನೇಶ್ ಅಮೀನು ಮಟ್ಟು ಉಪಸ್ಥಿತರಿದ್ದರು.

ಮನು ಪ್ರಣೀತ ಬ್ರಾಹ್ಮಣವಾದ ಯಾವ ಜನಪರ ಚಳವಳಿಯನ್ನೂ ಉಳಿಯಗೊಟ್ಟಿಲ್ಲ. ಹಿಂದೆ ಜನಪರ ಚಳವಳಿಯಲ್ಲಿದ್ದ ವ್ಯಕ್ತಿಗಳನ್ನೆ ಕೊಲ್ಲಲಾಗುತ್ತಿತ್ತು. ಈಗ ಚಳವಳಿಯ ಬದ್ಧತೆಗಳನ್ನು ದುರ್ಬಲಗೊಳಿಸುವಂತಹ ಕೆಲಸದಲ್ಲಿ ನಿರತವಾಗಿದೆ. ಆದರೆ, ಅಂಬೇಡ್ಕರ್ ಚಿಂತನೆಗಳನ್ನು ಎದೆಯೊಳಕ್ಕೆ ತೆಗೆದುಕೊಂಡವರು ಯಾವ ಕಾರಣಕ್ಕೂ ಬಲಪಂಥಿಯ ಸಿದ್ಧಾಂತಕ್ಕೆ ಸೋಲುವುದಿಲ್ಲ.
-ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News