ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟ ಅಗತ್ಯ: ದಿನೇಶ್ ಅಮೀನ್ ಮಟ್ಟು

Update: 2018-06-09 14:16 GMT

ಬೆಂಗಳೂರು, ಜೂ.9: ದಲಿತ ಸಂಘಟನೆಗಳು ಅಗೋಚರ ಅಸ್ಪಶ್ಯತೆ ವಿರುದ್ಧ ಹಾಗೂ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟ ರೂಪಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮೀನ್ ಮಟ್ಟು ಅಭಿಪ್ರಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ದಲಿತ ಚೇತನ ಪ್ರೊ.ಬಿ.ಕೃಷ್ಣಪ್ಪರವರ 80ನೆ ಜನುಮ ದಿನದ ಅಂಗವಾಗಿ ಆಯೋಜಿಸಿದ್ದ ‘ಸಾಮಾಜಿಕ ಸಮತಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬದಲಾದ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳ ಹೋರಾಟದ ಆದ್ಯತೆಗಳು ಹಾಗೂ ಗುರಿಗಳನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಇವತ್ತು ಗೋಚರ ಅಸ್ಪಶ್ಯತೆ ಕಡಿಮೆ ಆಗುತ್ತಿದೆ ಹಾಗೂ ಅಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ. ಆದರೆ, ಅಗೋಚರ ಅಸ್ಪಶ್ಯತೆ ತುಂಬಾ ಅಪಾಯಕಾರಿಯಾಗಿ ಬೆಳೆಯುತ್ತಿದ್ದು, ದಲಿತ ಯುವ ಸಮುದಾಯದ ಬದುಕನ್ನೇ ನಾಶ ಮಾಡುವಂತಹದ್ದಾಗಿದೆ. ಇದಕ್ಕೆ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವೆ ಸಾಕ್ಷಿಯೆಂದು ಅವರು ಹೇಳಿದರು.

ನಾವು ಇಂದಿಗೂ ಸರಕಾರಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗಾಗಿ ನಿರಂತರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ. ಆದರೆ, ಸರಕಾರಿ ಕ್ಷೇತ್ರದಲ್ಲಿರುವುದು ಕೇವಲ ಶೇ.2.5ರಷ್ಟು ಮೀಸಲಾತಿ ಮಾತ್ರ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗಗಳ ಸಂಖ್ಯೆ ವಿಫುಲವಾಗುತ್ತಿದೆ. ಇಲ್ಲಿ ಮೀಸಲಾತಿಗಾಗಿ ಒತ್ತಾಯಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಬದಲಾದ ಕಾಲಘಟ್ಟದಲ್ಲಿ ನಮ್ಮ ಸಂವಿಧಾನವು ಕೂಡ ಮಾರ್ಪಾಡಾಗಬೇಕಾದ ಅಗತ್ಯವಿದೆ. ಇವತ್ತು ಜಾಗತಿಕರಣದ ಪರಿಣಾಮದಿಂದಾಗಿ ಬಂಡವಾಳಶಾಹಿಗಳು ಎಲ್ಲ ಕ್ಷೇತ್ರದ ಮೇಲೆ ಹಿಡಿತವನ್ನು ಸಾಧಿಸಿ, ಜನವಿರೋಧಿಯಾಗಿ ಪರಿವರ್ತನೆಯಾಗಿವೆ. ಇಂತಹ ಸಂದರ್ಭದಲ್ಲಿ ಕೈಗಾರಿಕೆ ಹಾಗೂ ಕೃಷಿಯನ್ನು ರಾಷ್ಟ್ರೀಕರಣಗೊಳಿಸುವ ನಿಟ್ಟಿನಲ್ಲಿ ನಾವು ಹಕ್ಕೊತ್ತಾಯಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

ಇವಿಎಂ ಯಂತ್ರಗಳ ಮೇಲೆ ನಾಡಿನ ಜನತೆ ಅನುಮಾನ ವ್ಯಕ್ತಪಡಿಸುತ್ತಿರುವುದು ಸರಿಯಾಗಿಯೇ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿರುವುದು ಇವಿಎಂ ಯಂತ್ರಗಳ ಮೇಲಿನ ಅನುಮಾನಕ್ಕೆ ಮತ್ತಷ್ಟು ಪುಷ್ಟಿಕೊಟ್ಟಂತಾಗಿದೆ. ಹೀಗಾಗಿ ಇಂತಹ ಹುನ್ನಾರಗಳ ವಿರುದ್ಧ ಜನ ಚಳವಳಿಗಳು ಸದಾ ಎಚ್ಚರದಿಂದಿರಬೇಕು.
-ದಿನೇಶ್‌ ಅಮೀನ್ ಮಟ್ಟು, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News