ಸಮ್ಮಿಶ್ರ ಸರಕಾರದ ಪತನಕ್ಕೆ ಕ್ಷಣಗಣನೆ: ಕೇಂದ್ರ ಸಚಿವ ಅನಂತ ಕುಮಾರ
ಬೆಂಗಳೂರು, ಜೂ.9: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನೊಂದಿಗೆ ಸಮ್ಮಿಶ್ರ ಸರಕಾರದ ಪತನಕ್ಕೆ ಕ್ಷಣಗಣನೆಯೂ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದರು.
ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನವಾದ ಶನಿವಾರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಬ್ಯಾಕ್ ರ್ಯಾಲಿ ನಡೆಸಿ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ನಲ್ಲಿ ಒಡಕು ಇದ್ದರೆ, ಜೆಡಿಎಸ್‌ನಲ್ಲಿ ಬಿಕ್ಕಟ್ಟಿದೆ. ಆದರೆ, ಬಿಜೆಪಿಯಲ್ಲಿ ಒಗ್ಗಟ್ಟಿದೆ ಎಂದು ನುಡಿದರು.
ಜಯನಗರ ಕ್ಷೇತ್ರದಲ್ಲಿ ಜನಪ್ರಿಯ ಶಾಸಕರಾಗಿದ್ದ ಬಿ.ಎನ್.ವಿಜಯ ಕುಮಾರ್ ಸೋಲು, ಗೆಲುವುಗಳನ್ನು ಲೆಕ್ಕಿಸದೆ ಕ್ಷೇತ್ರದ ಅಭಿವೃದ್ಧಿಗಾಗಿ 20ವರ್ಷ ಶ್ರಮಿಸಿದ್ದಾರೆ. ಅದನ್ನು ಬಿಜೆಪಿ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ್ ಮುಂದುವರೆಸಿಕೊಂಡು ಹೋಗಲಿದ್ದಾರೆ. ಹೀಗಾಗಿ ಕ್ಷೇತ್ರದ ಜನತೆ ಬಿಜೆಪಿ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಬಿ.ಎನ್.ಪ್ರಹ್ಲಾದ್ ಮಾತನಾಡಿ, ಕ್ಷೇತ್ರದಲ್ಲಿ ಪಕ್ಷದ ಎಲ್ಲ ನಗರಪಾಲಿಕೆ ಸದಸ್ಯರು ಹಾಗೂ ಮುಖಂಡರು ಒಗ್ಗಟ್ಟಿನಿಂದ ತಮ್ಮ ಗೆಲುವಿಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಾರ ಯಶಸ್ವಿಯಾಗಿದ್ದು, ಕೆಲ ಶಕ್ತಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಅವರ ಪ್ರಯತ್ನ ವಿಫಲವಾಗಿರುವುದು ಫಲಿತಾಂಶದ ನಂತರ ಗೊತ್ತಾಗಲಿದೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರದಲ್ಲಿ ಶಾಸಕರಾದ ಎಂ.ಕೃಷ್ಣಪ್ಪ, ಮಾಜಿ ಮಹಾಪೌರ ಎಸ್.ಕೆ.ನಟರಾಜ್, ಪಾಲಿಕೆ ಸದಸ್ಯ ದೀಪಿಕಾ ಮಂಜುನಾಥ ರೆಡ್ಡಿ, ನಾಗರತ್ನ ರಾಮಮೂರ್ತಿ, ಲಕ್ಷ್ಮಿ ನಟರಾಜ್, ಮಾಲತಿ ಸೋಮಶೇಖರ್ ಮತ್ತಿತರ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.