×
Ad

ಲೋಕಾಯುಕ್ತರ ಹತ್ಯೆಗೆ ಯತ್ನ ಪ್ರಕರಣ: ತೇಜ್‌ರಾಜ್ ಶರ್ಮ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

Update: 2018-06-09 20:05 IST

ಬೆಂಗಳೂರು, ಜೂ.9: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ ಪ್ರಕರಣ ಸಂಬಂಧ ಆರೋಪಿ ತೇಜ್‌ರಾಜ್ ಶರ್ಮ ವಿರುದ್ಧ 600 ಪುಟಗಳ ವಿಸ್ತೃತ ಚಾರ್ಜ್‌ಶೀಟ್ ಅನ್ನು ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಲೋಕಾಯುಕ್ತರ ಹತ್ಯೆಗೆ ಆರೋಪಿ ತೇಜ್‌ರಾಜ್ ಶರ್ಮ ಪೂರ್ವ ಸಿದ್ಧತೆ ಮಾಡಿಕೊಂಡೇ ನಗರ ಎಂಎಸ್ ಕಟ್ಟಡದಲ್ಲಿರುವ ಲೋಕಾಯುಕ್ತ ಕಚೇರಿಗೆ ಹೋಗಿದ್ದ. ಕೊಲೆ ಮಾಡಲು ಆರೋಪಿ 60 ರೂಪಾಯಿ ಕೊಟ್ಟು ಚಾಕು ಖರೀದಿ ಮಾಡಿದ್ದ ಎಂಬ ಅಂಶಗಳನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ.
60 ರುಪಾಯಿ ಕೊಟ್ಟು ಚಾಕು ಖರೀದಿ ಮಾಡಿದರೂ ಅದು ಲೋಕಾಯುಕ್ತರನ್ನು ಕೊಲ್ಲಲಿಲ್ಲ. ರಾಮಣ್ಣ ನನಗೆ ಸರಿಯಾದ ಚಾಕು ಕೊಡದೇ ವಂಚಿಸಿದ್ದ ಎಂದು ತೇಜ್‌ರಾಜ್ ಶರ್ಮ ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾನೆ ಹೇಳಲಾಗುತ್ತಿದೆ.

ಪ್ರಕರಣದ ಹಿನ್ನಲೆ: ಮಾರ್ಚ್ 7 ರಂದು ಲೋಕಾಯುಕ್ತ ಕಚೇರಿಗೆ ನುಗ್ಗಿದ್ದ ತೇಜ್‌ರಾಜ್ ಶರ್ಮ, ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಅವರ ಕಚೇರಿಗೆ ನುಗ್ಗಿ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವಿಶ್ವನಾಥ್ ಶೆಟ್ಟಿ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಾಕುವಿನಿಂದ ಇರಿದ ತೇಜ್‌ರಾಜ್ ಶರ್ಮನನ್ನು ಲೋಕಾಯುಕ್ತ ಕಚೇರಿಯ ಸಿಬ್ಬಂದಿಯೇ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News