ಬೆಂಗಳೂರು: ಕಾರಿನೊಳಗೆ ಇಬ್ಬರು ಅನುಮಾನಾಸ್ಪದ ಸಾವು
ಬೆಂಗಳೂರು, ಜೂ.9: ಕಾರಿನಲ್ಲಿ ಓರ್ವ ಪುರುಷ ಮತ್ತು ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಅನ್ನಪೂರ್ಣೆಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಅನ್ನಪೂರ್ಣೆಶ್ವರಿ ನಗರದ ಐಟಿಐ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಭಾವನಾ(28), ಹೇಮಂತ್(30) ಎಂಬುವರು ಮೃತಪಟ್ಟಿದ್ದು, ಶವಗಳು ಪತ್ತೆಯಾಗಿವೆ.
ಮೃತ ಇಬ್ಬರು ಸ್ನೇಹಿತರಾಗಿದ್ದು, ಮೂರು ದಿನಗಳ ಹಿಂದೆ ಶೆಡ್‌ನಲ್ಲಿ ಕಾರು ನಿಲ್ಲಿಸಿಕೊಂಡು ಮಾತನಾಡುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಕಾರಿನ ಗಾಜುಗಳನ್ನು ಮುಚ್ಚಿ ಹವಾನಿಯಂತ್ರಿತ ಕಾರೊಳಗೆ ಕೂತು ಮಾತನಾಡುತ್ತಿದ್ದರು. ಈ ವೇಳೆ ಮೊದಲು ಕಾರಿನಲ್ಲಿ ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿಯಾಗಿ ಇಬ್ಬರು ಮೂರ್ಛೆ ಹೋಗಿರುವ ಸಾಧ್ಯತೆ ಇದೆ. ಆನಂತರ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾದ ಪರಿಣಾಮ ಇಬ್ಬರೂ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಗೊಂಡು ಕಾರು ಬಳಿ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಎಫ್‌ಎಸ್‌ಎಲ್ ತಂಡ ಹಾಗೂ ಪೊಲೀಸರು ಪರಿಶೀಲನೆ ನಡೆಸಿ, ಬಳಿಕ ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.