ಹಾಲೆಪ್ ಮಹಿಳಾ ಚಾಂಪಿಯನ್

Update: 2018-06-09 18:25 GMT

ಪ್ಯಾರಿಸ್, ಜೂ.9: ಸತತ ಎರಡನೇ ಬಾರಿ ಫ್ರೆಂಚ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ ವಿಶ್ವದ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್ ಕೊನೆಗೂ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇಲ್ಲಿ ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಫೈನಲ್‌ನಲ್ಲಿ 2017ರ ಅಮೆರಿಕನ್ ಓಪನ್ ಚಾಂಪಿಯನ್ ಅಮೆರಿಕದ ಆಟಗಾರ್ತಿ ಸ್ಟೋಯಾನೆ ಸ್ಟೀಪನ್ಸ್‌ರನ್ನು 3-6, 6-4, 6-1 ಸೆಟ್‌ಗಳಿಂದ ಮಣಿಸಿದ ಹಾಲೆಪ್ ಚೊಚ್ಚಲ ಗ್ರಾನ್‌ಸ್ಲಾಮ್ ಟ್ರೋಫಿಗೆ ಮುತ್ತಿಟ್ಟರು.

ಈ ಗೆಲುವಿನ ಮೂಲಕ 40 ವರ್ಷಗಳ ಬಳಿಕ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ರೊಮಾನಿಯದ ಮೊದಲ ಆಟಗಾರ್ತಿ ಎನಿಸಿಕೊಂಡರು. 1978ರಲ್ಲಿ ಹಾಲೆಪ್‌ನ ಮೆಂಟರ್ ವಿರ್ಜಿನಿಯಾ ರುಝಿಸಿ ಪ್ಯಾರಿಸ್‌ನ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ್ದ ಮೊದಲ ಬಾರಿ ಫ್ರೆಂಚ್ ಓಪನ್ ಫೈನಲ್ ಆಡಿರುವ ಸ್ಟೀಫನ್ಸ್ ಮೊದಲ ಸೆಟ್‌ನ್ನು 6-3 ರಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಆದರೆ, ಎರಡನೇ ಹಾಗೂ ಮೂರನೇ ಸೆಟ್‌ನಲ್ಲಿ ಸೋಲುವುದರೊಂದಿಗೆ ಎರಡನೇ ಬಾರಿ ಗ್ರಾನ್‌ಸ್ಲಾಮ್ ಜಯಿಸುವ ಅವಕಾಶ ಕಳೆದುಕೊಂಡರು.

  ಹಾಲೆಪ್ ಟೆನಿಸ್ ಓಪನ್ ಯುಗ ಆರಂಭವಾದ ಬಳಿಕ ಮೂರು ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದರೂ ಪ್ರಶಸ್ತಿ ಗೆಲ್ಲದ ಆಟಗಾರ್ತಿಯೆಂಬ ಅಪಕೀರ್ತಿಗೆ ಒಳಗಾಗಿದ್ದರು. ಇದೀಗ ಹಾಲೆಪ್ ನಾಲ್ಕನೇ ಪ್ರಯತ್ನದಲ್ಲಿ ಗ್ರಾನ್‌ಸ್ಲಾಮ್ ಟ್ರೋಫಿ ಎತ್ತಿಹಿಡಿಯಲು ಸಫಲರಾಗಿದ್ದಾರೆ. 26ರ ಹರೆಯದ ಹಾಲೆಪ್ ಈ ಹಿಂದೆ ಮೂರು ಬಾರಿ ಫೈನಲ್‌ನಲ್ಲಿ ಎಡವಿದ್ದಾರೆ. ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಲಾಟ್ವಿಯದ ಜೆಲೆನಾ ಒಸ್ಟಾಪೆಂಕೊ ವಿರುದ್ಧ ಒಂದು ಹಂತದಲ್ಲಿ 3-0 ಮುನ್ನಡೆ ಸಾಧಿಸಿದ ಹೊರತಾಗಿಯೂ ಪ್ರಶಸ್ತಿ ವಂಚಿತರಾಗಿದ್ದರು.

ಅಗ್ರ ಶ್ರೇಯಾಂಕದ ಹಾಲೆಪ್ ಸೆಮಿ ಫೈನಲ್‌ನಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಝರನ್ನು 6-1, 6-4 ನೇರ ಸೆಟ್‌ಗಳಿಂದ ಮಣಿಸಿ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ರೊಮಾನಿಯಾದಲ್ಲಿ ಈಗಾಗಲೇ ಸ್ಟಾರ್ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಹಾಲೆಪ್ ಎಪ್ರಿಲ್‌ನಲ್ಲಿ ರೊಮಾನಿಯ ನಿಯತಕಾಲಿಕೆಯೊಂದರ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಮೊನಾಗೆ ಎಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News