ಆರೆಸ್ಸೆಸ್, ಗಡ್ಕರಿಯಿಂದ ಮೋದಿ ಹತ್ಯೆಗೆ ಸಂಚು: ಬಿಜೆಪಿಯನ್ನು ಕುಟುಕಿದ ಶೆಹ್ಲಾ ರಶೀದ್

Update: 2018-06-10 07:19 GMT

ಹೊಸದಿಲ್ಲಿ, ಜೂ.10: ಆರೆಸ್ಸೆಸ್ ಹಾಗು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಧಾನಿ ಮೋದಿಯನ್ನು ಹತ್ಯೆಗೈಯಲು ಸಂಚು ನಡೆಸಿದಂತೆ ಕಾಣುತ್ತಿದೆ ಎಂದು ಜೆಎನ್ ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಶೀದ್ ಮಾಡಿರುವ ಟ್ವೀಟ್ ವಿವಾದ ಸೃಷ್ಟಿಸಿದೆ.

ರಾಜೀವ್ ಗಾಂಧಿ ಮಾದರಿಯಲ್ಲೇ ಪ್ರಧಾನಿ ಮೋದಿಯನ್ನು ಹತ್ಯೆಗೈಯಲು ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂದು ಪುಣೆ ಪೊಲೀಸರು ಆರೋಪಿಸಿದ ನಂತರ ಶೆಹ್ಲಾ ಈ ಟ್ವೀಟ್ ಮಾಡಿದ್ದಾರೆ.

“ಆರೆಸ್ಸೆಸ್/ಗಡ್ಕರಿ ಪ್ರಧಾನಿ ಮೋದಿಯನ್ನು ಕೊಲ್ಲಲು ಸಂಚು ರೂಪಿಸುತ್ತಿರುವಂತೆ ಕಾಣುತ್ತಿದೆ. ನಂತರ ಈ ಹೊಣೆಯನ್ನು ಮುಸ್ಲಿಮರು/ಕಮ್ಯುನಿಸ್ಟ್ ಗಳ ಮೇಲೆ ಹೊರಿಸುತ್ತಾರೆ. ಆನಂತರ ಮುಸ್ಲಿಮರನ್ನು ಕೊಲ್ಲುತ್ತಾರೆ #ರಾಜೀವ್ ಗಾಂಧಿ ಮಾದರಿ” ಎಂದು ಶೆಹ್ಲಾ ಟ್ವೀಟ್ ಮಾಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಸಚಿವ ಗಡ್ಕರಿ “ವಿಲಕ್ಷಣ ಕಾಮೆಂಟ್ ಗಳನ್ನು ಮಾಡಿರುವ ಸಮಾಜವಿರೋಧಿಗಳ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳಲಿದ್ದೇನೆ” ಎಂದಿದ್ದಾರೆ.

ಕೇಂದ್ರ ಸಚಿವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಶೆಹ್ಲಾ, “ಜಗತ್ತಿನ ಅತೀ ದೊಡ್ಡ ಪಕ್ಷದ ನಾಯಕರೇ ವ್ಯಂಗ್ಯದ ಟ್ವೀಟ್ ಗೆ ತಲೆಕೆಡಿಸಿಕೊಳ್ಳುತ್ತಾರೆ.  “ಟೈಮ್ಸ್ ನೌನಂತಹ ಮಾಧ್ಯಮಗಳು ತನ್ನ ಹಾಗು ತಂದೆಯ ವಿರುದ್ಧ ಆಧಾರವಿಲ್ಲದ ದಾಳಿ ನಡೆಸಿದ ನಂತರ ಅಮಾಯಕ ವಿದ್ಯಾರ್ಥಿ ಉಮರ್ ಖಾಲಿದ್ ಏನು ಮಾಡಬೇಕು ಎಂದು ಯೋಚಿಸಿ. ಮಿ. ಗಡ್ಕರಿ ನೀವು ರಾಹುಲ್ ಶಿವ್ ಶಂಕರ್ ವಿರುದ್ಧವೂ ಕ್ರಮ ಕೈಗೊಳ್ಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News